ಮೈಸೂರು

‘ವಿಶ್ವ ಪ್ರಸಿದ್ಧ ಭಾರತದ ಬೌದ್ಧ ಸ್ಮಾರಕಗಳು’ ಕೃತಿ ಲೋಕಾರ್ಪಣೆ

ಬೌದ್ಧ ಸಾಹಿತ್ಯ ಸಂಘದ ವಾರ್ಷಿಕ ಮಹಾಸಭೆ ಹಾಗೂ ‘ವಿಶ್ವ ಪ್ರಸಿದ್ಧ ಭಾರತದ ಬೌದ್ಧ ಸ್ಮಾರಕಗಳು’ ಎಂಬ ಕೃತಿ ಲೋಕಾರ್ಪಣೆ ಸಮಾರಂಭವನ್ನು ಭಾನುವಾರ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಮೈತ್ರಿ ಬುದ್ಧ ವಿಹಾರದ ವೀರ್ಯಶೀಲ ಭಂತೇಜಿ ಅವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮಹದೇವಕುಮಾರ್ ಪಿ.ಮಣಗಳ್ಳಿ ಅವರು ಬರೆದಿರುವ ‘ವಿಶ್ವ ಪ್ರಸಿದ್ಧ ಭಾರತದ ಬೌದ್ಧ ಸ್ಮಾರಕಗಳು’ ಎಂಬ ಪುಸ್ತಕ ಇಂದಿಗೂ ಎಂದೆದಿಗೂ ಅವಶ್ಯಕತೆಯಿರುವ ಪುಸ್ತಕವಾಗಿದೆ. ಇಂದಿನ ತಲೆಮಾರಿಗೆ ಮಾತ್ರವಲ್ಲದೇ ಮುಂದಿನ ತಲೆಮಾರಿಗೂ ಸಹ ಇದರ ಅಗತ್ಯತೆ ತುಂಬಾ ಇದೆ. ಸಾರ್ವತ್ರಿಕವಾದ ಪುಸ್ತಕ ಇದಾಗಿದೆ. ಬೌದ್ಧ ಧರ್ಮದ ಪವಿತ್ರ ಯಾತ್ರಾ ಸ್ಥಳಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ಕೃತಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಆಂಗ್ಲ ಭಾಷೆಗೂ ಸಹ ತರ್ಜುಮೆ ಆಗಬೇಕು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬುದ್ಧ ಹಾಗೂ ಬೌದ್ಧ ಧರ್ಮದ ಕುರಿತಾಗಿ ಅನೇಕ ಕೃತಿ-ಲೇಖನಗಳನ್ನು ಬರೆದಿದ್ದಾರೆ. ಗೌತಮ ಬುದ್ಧ ಯುದ‍್ಧವನ್ನು ತಿರಸ್ಕರಿಸಿ ದೇಶತ್ಯಾಗ ಮಾಡಿ ತನ್ನ 29 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದ. ನಂತರ ಸನ್ಯಾಸತ್ವ ಸ್ವೀಕರಿಸಿ ದಾರ್ಶನಿಕನಾದ ಎಂದು ಬುದ್ಧನ ಜೀವನ ಚರಿತ್ರೆ ಬಗ್ಗೆ ಹೇಳಿದರು.

ನಂತರ ಮಾತನಾಡಿದ ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅವರು, ಬುದ್ಧ ಹುಟ್ಟುವ ಮೊದಲು ಜಗತ್ತು ಅನಾಗರೀಕತೆಯಿಂದ ಕೂಡಿತ್ತು. ಸಮಾನತೆ ಇರಲಿಲ್ಲ. ಬಂದುತ್ವ ನಾಶವಾಗಿತ್ತು. ಬದುಕು ಅತ್ಯಂತ ಅಸಹನೀಯವಾಗಿತ್ತು. ನಂತರ ಜಗತ್ತನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ದ ದಾರ್ಶನಿಕ ಗೌತಮ ಬುದ್ಧ. ಶ್ರೇಷ್ಠ ಬದುಕುವ ವಿಧಾನವನ್ನು ಬುದ್ಧ ತಿಳಿಸಿಕೊಟ್ಟ. ಧರ್ಮ ಇರುವುದು ಮನುಷ್ಯರಿಗಾಗಿ, ಮನುಷ್ಯ ಇರುವುದು ಧರ್ಮಕ್ಕಾಗಿ ಅಲ್ಲ ಎಂದು ತಿಳಿಸಿಕೊಟ್ಟವನು ಬುದ್ಧ ಎಂದು ಹೇಳಿದರು.

ಜಗತ್ತಿಗೆ ಬೇಕಾಗಿರುವುದು ಬುದ‍್ಧ ಮತ್ತು ಆತನ ಮಾರ್ಗ. ಯುದ್ಧವಲ್ಲ. ಬುದ್ಧನ ಕ್ರಾಂತಿ ಅಹಿಂಸಾ ಕ್ರಾಂತಿ. ಅಲ್ಲಿ ರಕ್ತಪಾತಗಳಿಲ್ಲ. ಬೌದ್ಧಧರ್ಮ ಸತ್ಯದರ್ಶನ ಮಾಡಿಸುತ್ತದೆ. ಇಂದು ಭಯೋತ್ಪಾದಕತೆ ಹೆಚ್ಚಾಗಿದ್ದು, ನಕ್ಸಲೀಯರ ಹಾವಳಿ ಹೆಚ್ಚಾಗಿದೆ.   ಇತಿಹಾಸ ಮತ್ತು ಸಂಸ್ಕೃತಿಯ ಕೊರತೆಯಿಂದಾಗಿ ಸಮಾಜ ಅನಾಗರಿಕತೆಯೆಡೆಗೆ ಹೋಗುತ್ತಿದೆ ಎಂದರು.

ನಂತರ ಕೃತಿ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಆಕರ ಗ್ರಂಥವಾಗಿದೆ. ಎಲ್ಲರೂ ಒಪ್ಪಿಕೊಳ‍್ಳುವ ಸಾರ್ವತ್ರಿಕ ಕೃತಿ ಎಂದು ಹೇಳಿದರು.

ಕೆನರಾ ಬ್ಯಾಂಕ್ ನ ರಾಜಣ್ಣ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಿದ್ದರು. ಕೃತಿಯ ಕರ್ತೃ ಮಹದೇವಕುಮಾರ್ ಪಿ.ಮಣಗಳ್ಳಿ, ನಾಗ ಸಿದ್ಧಾರ್ಥ ಹೊಲೆಯರ್, ಜಗದೀಶ್, ಕೃಷ್ಣ, ಡಾ. ಎಸ್.ಮಂಗಳ ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: