ದೇಶಪ್ರಮುಖ ಸುದ್ದಿ

ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆ: 8 ಮಂದಿ ಸಾವು; 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ವಿಶಾಖಪಟ್ಟಣ,ಮೇ 7-ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ 8 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆ ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರಿಯಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿದೆ. ವಿಷಕಾರಿ ಅನಿಲ ಸುತ್ತು ಮುತ್ತಲಿನ ಪ್ರದೇಶಗಳಿಗೆ ಹರಡಿದೆ. ಇದರಿಂದಾಗಿ ಸುತ್ತು ಮುತ್ತಲಿನ ಪ್ರದೇಶದ ಜನರಿಗೆ ಉಸಿರಾಟದ ತೊಂದರೆ ಎದುರಾಗಿದೆ.

ಈ ದುರ್ಘಟನೆಯಲ್ಲಿ ಈವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ವೃದ್ಧರು, 7 ವರ್ಷದ ಬಾಲಕಿ ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಐದು ಮಂದಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಆಂಬ್ಯುಲೆನ್ಸ್, ಅಗ್ನಿ ಶಾಮಕ ದಳ ಅಸ್ವಸ್ಥ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಚಿತ್ರ ಕೃಪೆ: ಎಎನ್ಐ

ಅಸ್ವಸ್ಥರನ್ನು ವಿಶಾಖಪಟ್ಟದ ಕಿಂಗ್ ಜಾರ್ಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೊಂದು ಆಸ್ಪತ್ರೆಯಲ್ಲೇ ಸುಮಾರು 180ಕ್ಕೂ ಅಧಿಕ ಮಂದಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಷಕಾರಿ ಅನಿಲ ಸೋರಿಕೆಯಿಂದಾಗಿ ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಗೋಪಾಲಪಟ್ಟಣಂ ಸುತ್ತಲಿನ ಐದು ಗ್ರಾಮಗಳಲ್ಲಿನ ಜನರಿಗೆ ಉಸಿರಾಟದ ತೊಂದರೆ ಮತ್ತು ಗಂಟಲು ಕೆರೆತ ಸಮಸ್ಯೆ ಆರಂಭವಾಗಿದೆ. ನೂರಾರು ಮಂದಿ ಉಸಿರಾಟದ ಸಮಸ್ಯೆ, ಗಂಟಲು ನೋವು, ಕಣ್ಣಿನ ಉರಿ, ಹೊಟ್ಟೆ ನೋವು, ಇತರೆ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿಶಾಖಪಟ್ಟಣ ಮಹಾನಗರ ಪಾಲಿಕೆ ಗೋಪಾಲಪಟ್ಟಣದಲ್ಲಿ ಎಲ್‌ಜಿ ಪಾಲಿಮರ್ ಕಾರ್ಖಾನೆಯಿಂದ ಅನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಸುರಕ್ಷತಾ ಮುನ್ನೆಚ್ಚರಿಕೆಗಳಿಗಾಗಿ ಸುತ್ತು ಮುತ್ತಲಿನ ನಾಗರಿಕರು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಕೇಂದ್ರ ಸಚಿವ ಕಿಶನ್ ರೆಡ್ಡಿ ಸಂತಾಪ: ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಸಂತಾಪ ಸೂಚಿಸಿದ್ದು, ದುರಂತದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ಕುರಿತಂತೆ ನಾನು ಆಂಧ್ರ ಪ್ರದೇಶ ಮುಖ್ಯ ಕಾರ್ಯದರ್ಶಿಗಳು ಮತ್ತು ಆಂಧ್ರ ಪ್ರದೇಶ ಪೊಲೀಸ್ ಡಿಜಿಪಿ ಅವರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿ ನಿಯಂತ್ರಿಸಲು ಬೇಕಾದ ಎಲ್ಲ ನೆರವು ಕೇಂದ್ರ ಸರ್ಕಾರದಿಂದ ದೊರೆಯಲಿದೆ ಎಂದು ಹೇಳಿದ್ದಾರೆ. ಅಂತೆಯೇ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿಜಕ್ಕೂ ಈ ದುರಂತ ದುರದೃಷ್ಟಕರವಾದದ್ದು ಎಂದಿದ್ದಾರೆ. (ಎಂ.ಎನ್)

 

Leave a Reply

comments

Related Articles

error: