ಮೈಸೂರು

ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಕೊರೋನಾ ಹೋಗಲಾಡಿಸುವಂತೆ ಪ್ರಾರ್ಥಿಸಿ ನಡೆಯಿತು ಮೃತ್ಯುಂಜಯ ಹೋಮ

ಮೈಸೂರು,ಮೇ.8:- ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ನಿನ್ನೆ ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ನಲುಗಿರುವ ಜನರ ಆತಂಕವನ್ನು ದೂರಮಾಡಿ ನಂಜನಗೂಡಿಗೆ ಎದುರಾಗಿರುವ ಸಂಕಷ್ಟವನ್ನು ಹೋಗಲಾಡಿಸುವಂತೆ ಪ್ರಾರ್ಥಿಸಿ ಮೃತ್ಯುಂಜಯ ಹೋಮ ಹಾಗೂ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು   ನಡೆಸಲಾಯಿತು.

ದೇವಾಲಯದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಅರ್ಚಕರು ದೇವಾಲಯದ ವಸಂತ ಮಂಟಪದಲ್ಲಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸತತ ಎರಡೂವರೆ ತಾಸು ರುದ್ರ ಹೋಮ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಿದರು.

ಧಾರ್ಮಿಕ ಪೂಜಾ ಕಾರ‍್ಯದಲ್ಲಿ ಪಾಲ್ಗೊಂಡಿದ್ದ ಶಾಸಕ ಬಿ.ಹರ್ಷವರ್ಧನ್‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,   ಶ್ರೀ ನಂಜುಂಡೇಶ್ವರ ಸ್ವಾಮಿ ಎಲ್ಲ ಸಂಕಷ್ಟಗಳನ್ನು ಕಳೆಯುತ್ತಾನೆಂಬ ವಿಶ್ವಾಸ ಇಲ್ಲಿನ ಜನತೆಗಿದೆ. ಅದರಂತೆ ವಿಶೇಷ ಪೂಜೆ ಸಲ್ಲಿಸಿ ಕೊರೋನಾ ಎದುರಿಸಲು ಮಾನಸಿಕ ಸ್ಥೈರ್ಯಕ್ಕೆ ನೆರವಾಗುವಂತೆ ಭಕ್ತರು ಮನವಿ ಮಾಡಿದ್ದರು. ಜೊತೆಗೆ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ವಿಶೇಷ ಹೋಮ ಕೈಗೊಳ್ಳಲು ಸಲಹೆ ನೀಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೆಚ್ಚಿನ ಶಕ್ತಿ ನೀಡುವಂತೆಯೂ, ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಭಾಗ್ಯ ನೀಡುವಂತೆಯೂ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು. ಜ್ಯುಬಿಲಿಯೆಂಟ್‌ ಕಾರ್ಖಾನೆಯ ಮೂಲಕ 59 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿತ್ತು. ಶ್ರೀಕಂಠೇಶ್ವರಸ್ವಾಮಿ ಅನುಗ್ರಹದೊಂದಿಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಕೊರೋನಾವನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಲು ಯಶಸ್ವಿಯಾಗಿದೆ. ಐದಾರು ದಿನಗಳಲ್ಲಿ ಸೋಂಕಿತರೆಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: