ಮೈಸೂರು

ಡಿಎಫ್ ಆರ್ ಎಲ್ ನಿಂದ ಅತ್ಯಾಧುನಿಕ ಮೊಬೈಲ್ ಕಂಟೈನ್ಮೆಂಟ್ ವಾಹನ ‘ಪರಾಖ್’ ಕೆ.ಆರ್.ಆಸ್ಪತ್ರೆಗೆ ಹಸ್ತಾಂತರ

ಮೈಸೂರು,ಮೇ.12:- ಕೋವಿಡ್-19ಕುರಿತು ಸೂಕ್ಷ್ಮ ಹಾಗೂ ನಿಖರ ಪರೀಕ್ಷೆ ಕೈಗೊಳ್ಳಲು ಸಹಕಾರಿಯಾಗುವಂತೆ ನಗರದ ರಕ್ಷಣಾ ಆಹಾರ ಸಂಶೋಧನೆ ಪ್ರಯೋಗಾಲಯ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಮೊಬೈಲ್ ಕಂಟೈನ್ಮೆಂಟ್ ಲ್ಯಾಬ್ ‘ಪರಾಖ್’ ನ್ನು ಕೆ.ಆರ್.ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಈ ವಾಹನವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ ನಂಜರಾಜ್ ಅವರಿಗೆ ಹಸ್ತಾಂತರಿಸಲಾಯಿತು. ದಿನಕ್ಕೆ ಸುಮಾರು 300 ಕೋವಿಡ್ ಕೇಸ್ ಗಳ ಪರೀಕ್ಷೆ ನಡೆಸುತ್ತಿದ್ದ ಜಿಲ್ಲಾಡಳಿತಕ್ಕೆ ಡಿಎಫ್ ಆರ್ ಎಲ್ ಹಾಗೂ ಸಿಎಫ್ ಟಿಆರ್ ಐ ನೀಡಿರುವ ಯಂತ್ರೋಪಕರಣಗಳಿಂದ ಈಗ ದಿನಕ್ಕೆ ಸಾವಿರ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಪಡೆದುಕೊಮಡಂತಾಗಿದೆ.

ಪರಾಖ್ ಹಸ್ತಾಂತರಿಸಿದ ಬಳಿಕ ಮಾತನಾಡಿದ ಡಿಎಫ್ ಆರ್ ಎಲ್ ನಿರ್ದೇಶಕ ಡಾ.ಅನಿಲ್ ದತ್ ಸೆಮ್ ವಾಲ್ ಆಯ್ದ ಆಹಾರದ ಮೂಲದಿಂದ ಉತ್ಪತ್ತಿಯಾಗುವ ವೈರಾಣು ಮತ್ತು ವಷ ಜೀವಾಣುಗಳನ್ನು ಈ ಪರಾಖ್ ಲ್ಯಾಬ್ ನಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನದಿಂದ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅದನ್ನು ಇನ್ನೂ ಸ್ವಲ್ಪ ಆವಿಷ್ಕರಿಸಿ ಕೋವಿಡ್ ಪರೀಕ್ಷೆ ಮಾಡಲು ಸಹಕಾರಿಯಾಗುವಂತೆ ರೂಪಿಸಲಾಗಿದೆ ಎಂದರು.

ಪಿಸಿಆರ್ ಕಾರ್ಯಾಗಾರ, ರಿಯಲ್ ಟೈಮ್ ಪಿಸಿಆರ್ ಯಂತ್ರ, ಇಂಕ್ಯುಬೇಟರ್ ಡೀಪ್ ಪ್ರೀಜರ್ ಮತ್ತು ರೆಫ್ರಿಜರೇಟರ್ ಮುಂತಾದ ಪರಿಕರಗಳನ್ನು ಹೊಂದಿರುವ ಪರಾಖ್ ಮೊಬೈಲ್ ಲ್ಯಾಬ್ ಜೈವಿಕ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿನ ಪರೀಕ್ಷೆಗೆ ಒಂದು ವರದಾನವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ವೈರಲ್ ರಿಸರ್ಚ್ ಆ್ಯಂಡ್ ಡಯಾಗ್ನಸ್ಟಿಕ್ ಲ್ಯಾಬೋರೇಟರಿಯ ಪ್ರಭಾರ ಡಾ.ಅಮೃತಾ ಮತ್ತು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ಅನುರಾಧ, ಎಂಎಂಸಿ ಮತ್ತು ಆರ್ ಐ ನಪ್ರಾಧ್ಯಾಪಕ  ಡಾ.ಹೆಚ್.ಬಿ.ಶಶಿಧರ್, ಡಿಎಫ್ ಆರ್ ಎಲ್ ನ ಡಾ.ಎಂ.ಎಂ.ಫರೀದಾ, ಡಾ.ಎನ್.ಗೋಪಾಲನ್, ಡಾ.ಜೋಸೆಫ್ ಕಿಂಗ್ಸ್ ಟನ್ ಮತ್ತು ಜಯಪ್ರಕಾಶ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: