ಮೈಸೂರು

ಪತ್ರಿಕೋದ್ಯಮ ಕ್ಷೇತ್ರ ಎಲ್ಲಾ ಕ್ಷೇತ್ರಗಳಿಗಿಂತ ವಿಭಿನ್ನವಾಗಿದ್ದು, ಅಸಾಮಾನ್ಯ ಶಕ್ತಿಯನ್ನು ಹೊಂದಿದೆ : ಡಾ.ಎ.ಸುಬ್ರಹ್ಮಣ್ಯೇಶ್ವರರಾವ್

ಪತ್ರಿಕೋದ್ಯಮ ಕ್ಷೇತ್ರ ಎಲ್ಲಾ ಕ್ಷೇತ್ರಗಳಿಗಿಂತ ವಿಭಿನ್ನವಾಗಿದ್ದು, ಅಸಾಮಾನ್ಯ ಶಕ್ತಿಯನ್ನು ಹೊಂದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಹೇಳಿದರು.

ಸೋಮವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ  ಕರ್ನಾಟಕ ಮಾಧ‍್ಯಮ ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಅವರು ಮಾತನಾಡಿದರು.

ಪತ್ರಿಕೋದ್ಯಮ ತನ್ನದೇ ಆದ ಗುರುತರ ಜವಾಬ್ದಾರಿಯನ್ನು ಹೊಂದಿದ್ದು, ಸಮಾಜಕ್ಕೆ ಒಳಿತು ಮಾಡುವ ಸದುದ್ದೇಶ ಹೊಂದಿದೆ. ಯಾವುದೇ ಒಂದು ವಿಷಯದ ಬಗ್ಗೆ ಜನರಿಗೆ  ಸತ್ಯದರ್ಶನ ಮಾಡಿಸುವ ಮೂಲಕ ನಂಬಿಕಾರ್ಹವಾಗಿದೆ ಎಂದರು. ಆದರೆ ಸಾಮಾಜಿಕ ಮಾಧ‍್ಯಮಗಳು ನಂಬಿಕೆಗೆ ಅರ್ಹವಲ್ಲ. ಯಾವುದೇ ಜವಾಬ್ದಾರಿಗಳಿಗೆ ಹೊಣೆಯಾಗಿರುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಮಾಧ‍್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಮೈಸೂರು ಮಿತ್ರ ಪತ್ರಿಕೆಯ ಎ.ಸಿ. ಪ್ರಭಾಕರ್, ವಿಜಯಕರ್ನಾಟಕ ಪತ್ರಿಕೆಯ ಸಿ.ಜೆ.ರಾಜೀವ್, ವಿಜಯವಾಣಿ ಪತ್ರಿಕೆಯ ಛಾಯಾಗ್ರಾಹಕ ಕೆ.ಎಚ್.ಚಂದ್ರು ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ‍್ಯಕ್ಷ ಕೆ.ಶಿವಕುಮಾರ್, ಹಾಲಿ ಅಧ‍್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು, ವಿಜಯವಾಣಿ ಸಂಪಾದಕ ಸಿ.ಕೆ.ಮಹೇಂದ್ರ ಉಪಸ್ಥಿತರಿದ್ದರು.

Leave a Reply

comments

Related Articles

error: