ಪ್ರಮುಖ ಸುದ್ದಿಮೈಸೂರು

ಥಿಂಕ್ ಗ್ಲೋಬಲಿ ಅನ್ನೋ ಆಶಯಕ್ಕೂ ನೀರೆರೆದ ಮೋದಿ : ಸ್ಥಳೀಯ ವಾಣಿಜ್ಯ ಚಟುವಟಿಕೆಗೆ ಗ್ಲೋಬಲ್ ಮಾರ್ಕೆಟ್ ಆರಂಭವಾಗಬೇಕಿದೆ ; ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಮುಲ್ ವಿಚಾರವಾಗಿ ಶಾಸಕ ಸಾ.ರಾ.ಮಹೇಶ್ ಬೆಂಬಲಕ್ಕೆ ನಿಂತ ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರು,ಮೇ.13:- ಮೋದಿ ವಿಶೇಷ ಪ್ಯಾಕೇಜ್ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ, ಮಾಜಿ ಸಚಿವ ಹೆಚ್.ವಿಶ್ವನಾಥ್  ಇಡೀ ಭಾರತ ಮೋದಿ ಘೋಷಣೆಯನ್ನು ಸ್ವಾಗತಿಸುತ್ತದೆ. ಜನರ ಮೇಲೆ ಮೋದಿ ಒಲವು ಇದೆ. ಈ ಒಲವು ನೋಡಿದ್ರೆ ಈ ಪ್ಯಾಕೇಜ್ ಅನುಷ್ಠಾನ ಆಗುತ್ತೆ ಅನ್ನೋ  ನಂಬಿಕೆ ಇದೆ ಎಂದರು.

ಮೈಸೂರು ಜಲದರ್ಶಿನಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಥಿಂಕ್ ಗ್ಲೋಬಲಿ ಅನ್ನೋ ಆಶಯಕ್ಕೂ ಮೋದಿ ನೀರೆರೆದಿದ್ದಾರೆ. ಸ್ಥಳೀಯ ವಾಣಿಜ್ಯ ಚಟುವಟಿಕೆಗೆ ಗ್ಲೋಬಲ್ ಮಾರ್ಕೆಟ್ ಆರಂಭವಾಗಬೇಕಿದೆ. ಈ ವಿಶೇಷ ಪ್ಯಾಕೇಜ್‌ನಲ್ಲಿ ಎಲ್ಲರಿಗೂ ಅನುಕೂಲ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆರ್ಥಿಕ ಶಿಸ್ತು ರೂಪಿಸಬೇಕಿದೆ. ಈ ಹಿನ್ನಲೆಯಲ್ಲಿ ಅಗತ್ಯವಿರುವುದಕ್ಕೆ ಮಾತ್ರ ಖರ್ಚು ಮಾಡಿ ಎಂದು ಸಲಹೆ ನೀಡಿದ ಅವರು ನಮ್ಮ ಬಜೆಟ್‌ ಹಣದಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಬಳಕ್ಕೆ 21% ಹೋಗ್ತಿದೆ. ರಾಜ್ಯದ ಪಿಂಚಣಿದಾರರಿಗೆ 9% ಹಣ ಹೋಗುತ್ತದೆ. ಇದನ್ನೆಲ್ಲ ನಿಯಂತ್ರಣ ಮಾಡಬೇಕಿದೆ. ಹಾಗಂತ ಸಂಬಳ ಕಟ್ ಮಾಡಿ ಅಥವ ಪಿಂಚಣಿ ಕಟ್ ಮಾಡಿ ಅಂತ ನಾನು ಹೇಳೋಲ್ಲ. ಬೇರೆ ಬೇರೆ ರೂಪದಲ್ಲಿ ಅನಗತ್ಯ ಖರ್ಚು ನಿಯಂತ್ರಣ ಮಾಡಬೇಕು. ನಾವೆಲ್ಲರು ತ್ಯಾಗ ಮಾಡಲು ಸಿದ್ದರಾಗಬೇಕು. ಇಡೀ ಭಾರತ ತ್ಯಾಗ ಮಾಡಲು ಸಿದ್ದವಾಗಬೇಕು ಎಂದು ತಿಳಿಸಿದರು.

ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್‌ಸಿಂಹ ವಾಕ್ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿ ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ ಎಂದು ಶಾಸಕ ಹಾಗೂ ಸಂಸದರಿಗೆ ಸಲಹೆ ನೀಡಿದರು. ನಿಮ್ಮ ಅಸಮಾಧಾನ ಏನೆ ಇದ್ದರೂ ಪಕ್ಷದ ವೇದಿಕೆಯಲ್ಲಿರಲಿ. ಪಕ್ಷದಲ್ಲಿ ರಾಮದಾಸ್ ಹಿರಿಯರಿದ್ದಾರೆ. ಜಿಲ್ಲಾ ಮಂತ್ರಿಗಳು ಎಲ್ಲರ ಬಳಿ ಚರ್ಚಿಸಿ ನಿಮ್ಮ ಸಮಸ್ಯೆ ಬಗಹರಿಸಿಕೊಳ್ಳಿ. ಸುಮ್ಮನೆ ಬಹಿರಂಗವಾಗಿ ವಾಕ್ಸಮರ ಬೇಡ ಎನ್ನುವ ಮೂಲಕ ಪ್ರತಾಪ್‌ಸಿಂಹ ಹಾಗೂ ರಾಮದಾಸ್‌ಗೆ ಸಲಹೆ ನೀಡಿದರು.

ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಹಿಂದೆ ನಮಗೆ ಮುಖ್ಯಮಂತ್ರಿಗಳು ಜಿಲ್ಲೆ ಮಾಡೋ ಭರವಸೆ ನೀಡಿದ್ದಾರೆ ಎಂದರು.  ಜಿಲ್ಲೆ ಮಾಡಲು ನಿಮಗೇನು ಅಧಿಕಾರ ಇದೆ ಎಂದು  ಪ್ರಶ್ನಿಸಿದ್ದ ಶಾಸಕ ಸಾ.ರಾ.ಮಹೇಶ್ ಪ್ರಶ್ನೆಗೆ ಉತ್ತರಿಸಿ ನಾನು ಪ್ರಜ್ಞಾವಂತ ಭಾರತೀಯ ಪ್ರಜೆ. ಹಾಗಾಗಿ ಕೇಳ್ತಾ ಇದ್ದೇನೆ. ನೀವ್ಯಾರು ಅಂತ ಪ್ರಶ್ನೆ ಮಾಡೋದು ಸರಿಯಲ್ಲ. ನೀವು ಬೆಂಬಲಿಸಬೇಕು. ಯಾದಗಿರಿ 2 ತಾಲೂಕಿಗೆ ಜಿಲ್ಲೆಯಾಗಿದೆ. ರಾಮನಗರ ಸಹ 2 ತಾಲೂಕಿಗೆ ಜಿಲ್ಲೆಯಾಗಿದೆ. ಮಾಜಿ ಸಚಿವರು ,ಶಾಸಕರಾಗಿ ನೀವು ನಮನ್ನು ಬೆಂಬಲಿಸಬೇಕು. ಕೋವಿಡ್ ಸಮಸ್ಯೆ ಮುಗಿದ ನಂತರ ಜಿಲ್ಲೆ ಮಾಡುವ ವಿಚಾರವಾಗಿ ಹೋರಾಟ ಪ್ರಾರಂಭಿಸುತ್ತೇವೆ. ಎಲ್ಲಾ ಅಭಿಮಾನಿಗಳು,ಸಂಘ ಸಂಸ್ಥೆಗಳು ಎಲ್ಲರ ಜೊತೆ ಚರ್ಚೆ ಮಾಡಿ ಹೋರಾಟ ರೂಪಿಸುತ್ತಿದ್ದೇವೆ. ಸಭೆಗಳನ್ನು ಮಾಡಿ ಹೋರಾಟ ಮಾಡುತ್ತೇವೆ.  ಬಳ್ಳಾರಿಯವರು ಅವರ ಅವಶ್ಯಕತೆಗೆ ತಕ್ಕಂತೆ ಕೇಳ್ತಾರೆ. ನಾವು ನಮ್ಮ ಅವಶ್ಯಕತೆಗೆ ಕೇಳ್ತಾ ಇದ್ದೀವಿ ಎಂದು ಸ್ಪಷ್ಟಪಡಿಸಿದರು.

ಮೈಸೂರು ಮೈಮುಲ್‌ನಲ್ಲಿ ಅಕ್ರಮ ನೇಮಕಾತಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಶಾಸಕ ಸಾ.ರಾ.ಮಹೇಶ್ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಮೂಲಕ  ಮೈಮುಲ್ ವಿಚಾರವಾಗಿ ಶಾಸಕ ಸಾ.ರಾ.ಮಹೇಶ್ ಬೆಂಬಲಕ್ಕೆ ನಿಂತರು. ಮೈಮುಲ್‌ನಲ್ಲಿ ಅಕ್ರಮ ನೇಮಕಾತಿ ಆರೋಪ ಇದೆ.  ಈ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಿ. ಅಲ್ಲಿ ಏನಾಗಿದೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ. ಶಾಸಕ ಸಾ.ರಾ.ಮಹೇಶ್ ಆರೋಪವನ್ನ ಹಾಗೆಯೇ ಬಿಡಬಾರದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: