ಪ್ರಮುಖ ಸುದ್ದಿಮನರಂಜನೆ

ಚಂದನವನದ ಹಾಸ್ಯನಟ ಮೈಕೆಲ್ ಮಧು ನಿಧನ

ರಾಜ್ಯ(ಬೆಂಗಳೂರು)ಮೇ.15:- ಹಾಸ್ಯನಟ ಮೈಕೆಲ್ ಮಧು ಬುಧವಾರ ಕೊನೆ ಉಸಿರೆಳೆದಿದ್ದಾರೆ. ಬೆಳಿಗ್ಗೆ ಮನೆಯಲ್ಲಿ ಜ್ಞಾನ ತಪ್ಪಿ ಬಿದ್ದಿದ್ದ ನಟ ಮೈಕೆಲ್ ಮಧು ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು‌‌. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೈಕೆಲ್ ಮಧು ಮೃತಪಟ್ಟಿದ್ದಾರೆ.

ಇತ್ತೀಚೆಗೆ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರನ್ನು ಕಳೆದುಕೊಂಡಿದ್ದ ಚಿತ್ರರಂಗಕ್ಕೆ  ಈ ಮೂಲಕ ಮತ್ತೊಂದು ಶಾಕ್ ಎದುರಾಗಿದೆ. ತಮ್ಮ ಪಾತ್ರಗಳಿಂದಲೇ ನಕ್ಕು ನಗಿಸ್ತಿದ್ದ ಮತ್ತೊಬ್ಬ ಹಾಸ್ಯ ನಟನ ಇಹಲೋಕ ಯಾತ್ರೆಗೆ 2020 ಬ್ರೇಕ್ ಹಾಕಿದೆ ಮೈಕೆಲ್ ಮಧು ಅವರಿಗೆ  50 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು   ಅಗಲಿದ್ದಾರೆ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹಿಟ್ ಓಂ ಸಿನಿಮಾ ಮೂಲಕ ಮೈಕೆಲ್ ಮಧು ಚಿತ್ರ ಜೀವನ ಪ್ರಾರಂಭವಾಗಿತ್ತು.

ಕಳೆದ ಎರಡೂವರೆ ದಶಕಗಳಿಂದ ಕನ್ನಡದ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೈಕಲ್‌ ಮಧು ವಿವಿಧ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನೇ ಮೈಕೆಲ್‌ಮಧು ನಿರ್ವಹಿಸಿದ್ದಾರೆ. ಇತ್ತೀಚಿಗೆ ಗೋಸಿ ಗ್ಯಾಂಗ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಸೂರ್ಯವಂಶ, ಯಜಮಾನ, ಎ.ಕೆ.47, ಭಜರಂಗಿ, ಎ, ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ  ತಮಗೆ ಸಿಕ್ಕ ಸಣ್ಣ ಸಣ್ಣ ಪಾತ್ರಗಳಲ್ಲಿಯೇ ಗಮನ ಸೆಳೆದಿದ್ದರು.

ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಾಶಿನಾಥ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಮೈಕಲ್ ಮಧು.

ನೃತ್ಯ ನಿರ್ದೇಶಕ ಆಗಬೇಕು ಎಂದು ಕನಸು ಕಂಡಿದ್ದರು

ನಟ ಆಗುವುದಕ್ಕೂ ಮುನ್ನ ನೃತ್ಯ ನಿರ್ದೇಶಕ ಆಗಬೇಕು ಎಂದು ಮೈಕೆಲ್‌ ಮಧು ಕನಸು ಕಂಡಿದ್ದರು. ಅವರು ಚೆನ್ನಾಗಿ ಡ್ಯಾನ್ಸ್‌ ಮಾಡುತ್ತಾರೆ ಎಂಬ ಕಾರಣಕ್ಕೇ ಅವರ ಹೆಸರಿನ ಜೊತೆ ‘ಮೈಕೆಲ್‌’ ಸೇರಿಕೊಂಡಿತ್ತು. ಆದರೆ ಅವರ ಡ್ಯಾನ್ಸ್ ಉತ್ಸಾಹಕ್ಕೆ ಪ್ರೋತ್ಸಾಹ ಸಿಗದ ಕಾರಣ ನೃತ್ಯ ನಿರ್ದೇಶಕನಾಗುವ ಕನಸಿಗೆ ವಿದಾಯ ಹೇಳಿ ನಟನೆಯತ್ತ ಗಮನ ಹರಿಸಿದರು.

‘ಸಿಂಗಾರಿ ಬಂಗಾರಿ’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ಮೈಕೆಲ್‌ ಮಧು, ನಂತರ ಹಲವಾರು ಅವಕಾಶಗಳನ್ನು ಪಡೆದುಕೊಂಡರು. ಇತ್ತೀಚೆಗೆ ಚಿತ್ರರಂಗದಿಂದ ಕೊಂಚ ದೂರ ಆಗಿದ್ದರು. ಅವಕಾಶಗಳ ಕೊರತೆ ಅವರನ್ನು ಕಾಡಿತ್ತು.

ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಮೈಕೆಲ್‌ ಮಧು ಅವರ್‌ ಮೃತ ದೇಹವನ್ನು ಗುರುವಾರ (ಇಂದು) ಕಿಮ್ಸ್‌ ಆಸ್ಪತ್ರೆಯು ಕುಟುಂಬದವರಿಗೆ ಒಪ್ಪಿಸಲಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: