ಮೈಸೂರು

ಪ್ರಧಾನಿ ನರೇಂದ್ರ ಮೋದಿ 20ಲಕ್ಷಕೋಟಿ ರೂ,ಗಳ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ : ಶ್ರೀನಿವಾಸ್ ಪ್ರಸಾದ್

ಮೈಸೂರು,ಮೇ.14:- ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಐತಿಹಾಸಿಕ ಆರ್ಥಿಕ ಪ್ಯಾಕೇಜ್ ಸ್ವಾಗತಾರ್ಹವಾಗಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕೊರೋನಾ ಅಪಾಯಕಾರಿ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವ ತತ್ತರಿಸಿ ಹೋಗಿದೆ. ಯಾವುದೇ ಔಷಧವಿಲ್ಲದೇ ಈ ಸಾಂಕ್ರಾಮಿಕ ರೋಗಕ್ಕೆ ಸಾಮಾಜಿಕ ಅಂತರ ಮಹತ್ವದ ಮುನ್ನೆಚ್ಚರಿಕೆಯ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶಕ್ಕೆ ಲಾಕ್ ಡೌನ್ ಕ್ರಮವನ್ನು ಮಾರ್ಚ್23ರಿಂದಲೇ ಘೋಷಿಸಿ ಇದುವರೆಗೂ ಮುಂದುವರಿಸಿಕೊಂಡು ಬಂದಿರುವುದು ಅದರ ಪ್ರತಿಫಲವಾಗಿ ಭಾರತ ತುಂಬ ದೊಡ್ಡ ಗಂಡಾಂತರದಿಂದ ಪಾರಾಗುವಂತಾಗಿದೆ ಎಂದಿದ್ದಾರೆ.

ಮೇ.12ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳಿಂದ ತರಿಸಿಕೊಂಡ ವರದಿಯನ್ನು ಪರಿಶೀಲಿಸಿ ರಾಜ್ಯಗಳು ಅನುಭವಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು 20ಲಕ್ಷಕೋಟಿ ರೂ,ಗಳ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹವಾದ ಐತಿಹಾಸಿಕ ತೀರ್ಮಾನವಾಗಿದೆ. ಕೊರೋನಾ ಮಹಾಮಾರಿಯ ಭೀಕರ ಹೊಡೆತಕ್ಕೆ ದೇಶದ ಆರ್ಥಿಕ ಸ್ಥಿತಿ ತುಂಬಾ ಏರುಪೇರಾಗಿದೆ. ವಿಶೇಷವಾಗಿ ಶ್ರಮಿಕ ವರ್ಗ ತುಂಬಾ ತೊಂದರೆಗೊಳಗಾಗಿದೆ. ಸಣ್ಣ ಕೈಗಾರಿಕೆಗಳು ನೆಲಕಚ್ಚುವಂತಾಗಿದೆ. ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರಧಾನ ಮಂತ್ರಿಗಳು ಘೋಷಿಸಿರುವ ಈ ವಿಶೇಷ ಪ್ಯಾಕೇಜ್ ನ್ನು ಎಲ್ಲಿಯೂ ಸೋರಿಹೋಗದಂತೆ ಮಧ್ಯವರ್ತಿಗಳು ಬಾಯಿಹಾಕದಂತೆ ಜಾಗೃತೆವಹಿಸಿ ದಕ್ಷತೆಯಿಂದ ಅನುಷ್ಠಾನಗೊಳಿಸಿದರೆ ಪ್ರಧಾನಿಯವರ ಭಾರತವನ್ನು ಸ್ವಾವಲಂಬಿ ರಾಷ್ಟ್ರವಾಗಿಸಬೇಕೆಂಬ ಕನಸು ನನಸಾಗಲಿದೆ. ಈ ಮಹಾನ್ ಕಾರ್ಯದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಎಲ್ಲ ಹಂತದ ನೌಕರರು ಹಾಗೂ ನಾಗರಿಕರು ಪ್ರಾಮಾಣಿಕರು ಸಹಕರಿಸುವುದು ಅಗತ್ಯವಾಗಿದೆ. ಪಕ್ಷಾತೀತವಾಗಿ, ಮತಾತೀತವಾಗಿ ನಾವೆಲ್ಲರೂ ಕೊರೋನಾ ವಿರುದ್ಧ ಹೋರಾಡಿ ಭಾರತವನ್ನು ಬಲಪಡಿಸೋಣ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: