ಪ್ರಮುಖ ಸುದ್ದಿಮೈಸೂರು

  ಸಚಿವ ಸೋಮಶೇಖರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಶ್ರೀವತ್ಸ

ಮೈಸೂರು,ಮೇ.15:-  ಬಿಜೆಪಿ ಕಾರ್ಯಕರ್ತರಿಗೆ ಹಾಗೂ ನಾಗರಿಕರಿಗೆ ಉಪಯೋಗಕಾರಿ ಯೋಜನೆಗಳು ದೊರಕುವಲ್ಲಿ ಸಚಿವ ಸೋಮಶೇಖರ್ ಅವರ ಪಾತ್ರ ದೊಡ್ಡದಿದೆ.  ಆಹಾರ ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಹೆಚ್ಚುವರಿ ಕಿಟ್ ದೊರಕಿಸಿ ಸಹಕರಿಸಿದ್ದಾರೆ ಎಂದು ಮೈಸೂರು ಜಿಲ್ಲಾ  ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ನಡೆದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿಂದು ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಸೋಮಶೇಖರ್ ಅವರು ಜಿಲ್ಲಾ ಉಸ್ತುವಾರಿ ಹೊಣೆ ಹೊರುತ್ತಿದ್ದಂತೆ ಕಾರ್ಯಕರ್ತರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಈಗ ಆ ಸಂದರ್ಭ ಒದಗಿಬಂದಿದೆ ಎಂದು ತಿಳಿಸಿದರು.

ಪಕ್ಷದ ಕಾರ್ಯಕರ್ತರಲ್ಲಿ ಹುರುಪು

ಪಕ್ಷದ ಕಾರ್ಯಕರ್ತರು ಸಚಿವರಿಂದ ಹೆಚ್ಚಿನದ್ದೇನನ್ನೂ ಬಯಸಲ್ಲ. ಅವರನ್ನು ಪ್ರೀತಿಯಿಂದ ಮಾತನಾಡಿಸಿದರೆ ಸಾಕು. ಅವರು ಇನ್ನೂ ಹುರುಪಿನಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಸಚಿವರ ಈ ಭೇಟಿ ಈಗ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪಕ್ಷಕ್ಕೆ ಮತ್ತಷ್ಟು ಬಲ

ಬಿಜೆಪಿ ಬಲಾಢ್ಯವಾಗಿರುವ ಯಶವಂತಪುರ ಕ್ಷೇತ್ರದಲ್ಲಿ 2 ಬಾರಿ ಕಾಂಗ್ರೆಸ್ ನಲ್ಲಿರುವಾಗ ಗೆದ್ದಿದ್ದರು ಎಂದರೆ ಅವರ ವೈಯುಕ್ತಿಕ ವರ್ಚಸ್ಸು ಯಾವ ಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿ. ಹಾಗೆಯೇ ಇಂಥವರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಸಾಕಷ್ಟು ಬಲ ತಂದಿದೆ. ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ರಚನೆಯಲ್ಲೂ ಇವರ ಪಾತ್ರ ಬಹಳ ದೊಡ್ಡದಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಸರ್ಕಾರಕ್ಕೆ ಕೊಡುಗೆ ಅನನ್ಯ

ಮೈಸೂರು ಮೃಗಾಲಯಕ್ಕೆ 2.51 ಕೋಟಿ ರೂ. ವನ್ನು ಕೊಡುಗೆಯಾಗಿ ಕೊಡಿಸಿದರು. ಎಲ್ಲ ಜನಪ್ರತಿನಿಧಿಗಳು, ಅಕ್ಕ ಸಂಸ್ಥೆಗೂ ಮನವಿ ಮಾಡಿದ್ದರು. ಅವರಿಡಲೂ ದೇಣಿಗೆ ಬಂದಿದೆ. ಮೂಕಪ್ರಾಣಿಗಳ ಮೇಲಿನ ಅವರ ಪ್ರೀತಿ ನನ್ನ ಹೃದಯ ಮುಟ್ಟಿದೆ. ಇದು ಎಂದೆಂದೂ ಎಲ್ಲರಿಗೂ ಮಾದರಿಯಾಗುವ ಹೆಮ್ಮೆಯ ಕೆಲಸ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮುಖ್ಯಮಂತ್ರಿಗಳ ಕೈ ಬಲಪಡಿಸಿದರು

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 51.84 ಕೋಟಿ ರೂಪಾಯಿಯನ್ನು ಸಹಕಾರ ಸಂಸ್ಥೆಯೊಂದರಿಂದಲೇ ಕೊಡುವ ಮೂಲಕ ರಾಜ್ಯಸರ್ಕಾರ ಹಾಗೂ ಮುಖ್ಯಮಂತ್ರಿಗಳ ಕೈಯನ್ನು ಬಲಪಡಿಸಿದ್ದಾರೆ. ಜೊತೆಗೆ ಮೈಸೂರು ಜಿಲ್ಲಾಡಳಿತಕ್ಕೆ ಕೋವಿಡ್ -19 ಸಂದರ್ಭದಲ್ಲಿ ಸಹಕರಿಸುತ್ತಿದ್ದಾರೆ ಎಂದು ಸಂಸದರು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ 3 ಸಾವಿರ

ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೂ ತಲಾ 3 ಸಾವಿರ ರೂಪಾಯಿಯನ್ನು ಸಹಕಾರ ಇಲಾಖೆ ವತಿಯಿಂದ ನೀಡುತ್ತಿರುವುದು ಶ್ಲಾಘನೀಯ. ಅವರ ಜನಪರ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಮಾತು ಕಡಿಮೆ ಕೆಲಸ ಜಾಸ್ತಿ

ಮೈಸೂರು ಎಪಿಎಂಸಿಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗ ಕೋಲ್ಡ್ ಸ್ಟೋರೇಜ್ ಬೇಕೆಂಬ ಮನವಿ ಪತ್ರವನ್ನು ಕೊಟ್ಟಿದ್ದರು. ಅದಾಗಿ ನಾಲ್ಕು ದಿನಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸಿದ್ದರು. ಹೀಗಾಗಿ ಇವರದ್ದು ಮಾತು ಕಡಿಮೆ, ಕೆಲಸ ಜಾಸ್ತಿ ಎಂದು ಶಾಸಕ ನಾಗೇಂದ್ರ ಹೇಳಿದರು.

ಮೈಸೂರು ಮೃಗಾಲಯಕ್ಕೆ ಬೆಂಗಳೂರಿನಿಂದ ಕೊಡುಗೆ ಕೊಡಿಸಿರುವುದು ಹೆಮ್ಮೆಯ ವಿಚಾರ. ಮೈಸೂರಿನಿಂದಲೇ ಸಾಧ್ಯವಾಗದ ಕೆಲಸ ಬೆಂಗಳೂರಿನಿಂದ ಮಾಡಿದ್ದಾರೆ. ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: