ಪ್ರಮುಖ ಸುದ್ದಿ

ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ

ರಾಜ್ಯ( ಮಡಿಕೇರಿ) ಮೇ 16 :- ಜಿಲ್ಲೆಯಲ್ಲಿರುವ ಎಲ್ಲಾ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ಕರ್ನಾಟಕ ಮತ್ತು ಅವರವರ ಸ್ವಂತ ಊರುಗಳಿಗೆ ಕಳುಹಿಸಲು ಕೊಡಗು ಜಿಲ್ಲಾಡಳಿತವು ಕೆಎಸ್‍ಆರ್‍ಟಿಸಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಹಾಗೆಯೇ ಜಿಲ್ಲೆಯಲ್ಲಿರುವ ಉತ್ತರ ಭಾರತದ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸುವ ಸಂಬಂಧ ಸರ್ಕಾರದಿಂದ ಆಯೋಜಿಸಲಾಗಿರುವ ವಿಶೇಷ ಶ್ರಮಿಕ ರೈಲುಗಳಿಗೆ ಕಾರ್ಮಿಕರು ತೆರಳಲು ಅನುಕೂಲವಾಗುವಂತೆ ಸಂಬಂಧಪಟ್ಟ ರೈಲು ನಿಲ್ದಾಣಗಳಿಗೆ ಕಾರ್ಮಿಕರನ್ನು ತಲುಪಿಸಲು ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಮೇ 14 ರ ವರೆಗೆ ಅಂದಾಜು 204 ಟ್ರಿಪ್‍ಗಳನ್ನು ಕಾಯ್ದಿರಿಸಲಾಗಿದೆ. ಸುಮಾರು 4 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಬಸ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.
ತವರಿಗೆ ಹೊರಟ ಕಾರ್ಮಿಕರು
ನಗರದ ಕೆಎಸ್‍ಆರ್‍ಟಿಸಿ ಘಟಕ ವತಿಯಿಂದ ಬೆಳಂಗಾಲದಿಂದ ವೆಲ್ಲುಮಲೈ ಮತ್ತು ಸೇಲಂಗೆ, ಸುಂಟಿಕೊಪ್ಪದಿಂದ ವೆಲಪುರಂ, ನಮಕಲ್, ಸೇಲಂ, ತಿರುವನಮಲೈ ಮತ್ತು ಕಲಕುರ್ಚಿಗೆ, ಬೋಯಿಕೇರಿಯಿಂದ ವೆಲ್ಲಿಪುರಂಗೆ, ಸೋಮವಾರಪೇಟೆಯಿಂದ ಕಲಕುರ್ಚಿಗೆ, ಚೆಟ್ಟಳ್ಳಿಯಿಂದ ವೆಲ್ಲಿಮಲೈಗೆ ಒಟ್ಟು 11 ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲಿ 205 ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಜರ್, ಬಿಸ್ಕತ್ತು ಪಾಕೆಟ್, ಜ್ಯೂಸ್ ಪಾಕೆಟ್ ಮತ್ತು ಕುಡಿಯುವ ನೀರಿನ ಬಾಟಲನ್ನು ಪ್ರತಿಯೊಬ್ಬ ಕಾರ್ಮಿಕರಿಗೆ ಮತ್ತು ಬಸ್ಸಿನ ಚಾಲಕರಿಗೆ ವಿತರಿಸಿ ಕಳಿಸಿಕೊಡಲಾಯಿತು.
ಉಳಿದ 22 ಬೀಸಲೇರಿ, 17 ಬಿಸ್ಕೇಟ್ ಪಾಕೇಟ್, 11 ಜ್ಯೂಸ್ ಪಾಕೇಟ್, 250 ಮಾಸ್ಕ್, 23 ಸ್ಯಾನಿಟೈಜರ್‍ಗಳನ್ನು ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಿಗೆ ಉಳಿದ ಬಸ್ಸುಗಳಿಗೆ ವಿತರಿಸುವ ಸಲುವಾಗಿ ಒಪ್ಪಿಸಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಗೀತಾ ಎಚ್, ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ, ಕಾರ್ಮಿಕ ಇಲಾಖೆಯ ಶಿರಾಜ್ ಅಹ್ಮದ್, ಟಿ.ವಿ.ಲಕ್ಷ್ಮೀಶ, ಕೆ.ಆರ್.ಗಣೇಶ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: