ಕರ್ನಾಟಕಪ್ರಮುಖ ಸುದ್ದಿ

ವಿಧಾನಪರಿಷತ್ ಕಲಾಪ ವೇಳೆ ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ

ವಿಧಾನ ಪರಿಷತ್ ನಲ್ಲಿ ಸೋಮವಾರ ಬಜೆಟ್ ಕುರಿತು ಚರ್ಚೆ ನಡೆದಿದೆ. ಈ ವೇಳೆ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ನೀರಾವರಿ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇಲ್ಲ. 4 ವರ್ಷದಲ್ಲಿ ನೀರಾವರಿಯಲ್ಲಿ ಸಾಧನೆ ಶೂನ್ಯವಾಗಿದೆ. ನೀರಾವರಿ ಬಗ್ಗೆ ಸುಳ್ಳು ಆಶ್ವಾಸನೆ ನೀಡಿ, ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸದೆ ಈಗ ಮತ್ತಷ್ಟು ಯೋಜನೆ ತರಲು ಹೊರಟಿದೆ ಎಂದು ಸರ್ಕಾರದ ವಿರುದ್ಧ ಈಶ್ವರಪ್ಪ ಗುಡುಗಿದರು. ಇನ್ನೂ ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ದುಡ್ಡು ಸಿಗೋ ಇಲಾಖೆಗೆ ಹಾಕಿಸಿಕೊಳ್ಳೊಕೆ ಅಧಿಕಾರಿಗಳು ಕಾಯುತ್ತ ಇರುತ್ತಾರೆ ಎಂದು ಆರೋಪಿಸಿದರು. ಈ ಸರ್ಕಾರದಲ್ಲಿ ಕಂಟ್ರಾಕ್ಟರ್ ಗಳ ಭಯ ಇಲ್ಲ. ನಾಲ್ಕು ಜನರ ಕಂಟ್ರಾಕ್ಟರ್ ನ್ನು ಕಪ್ಪು ಪಟ್ಟಿಗೆ ಹಾಕಿ ಕೇಸ್ ಹಾಕಿ, ಆವಾಗ ಅವರು ಸರಿದಾರಿಗೆ ಬರುತ್ತಾರೆ. ಬಿಡುಗಡೆ ಆದ ನೀರಾವರಿ ಹಣ ಎಲ್ಲಿಗೆ ಹರಿದು ಹೋಗಿದೆ ಎಂದು ಸರ್ಕಾರಕ್ಕೆ ಈಶ್ವರಪ್ಪ ಪ್ರಶ್ನೆ ಹಾಕಿದರು. ಎತ್ತಿನ ಹೊಳೆ ಯೋಜನೆಯಲ್ಲಿ ಕೆಲಸವಾಗದಿದ್ದರೂ ಕೋಟಿ ಕೋಟಿ ಹಣ ಖರ್ಚು ಆಗಿದೆ. ಮಹಾದಾಯಿ ಸಮಸ್ಯೆಯಲ್ಲಿ ರಾಜಕೀಯ ಮಾಡದೇ, ಪಕ್ಷಾತೀತವಾಗಿ ಈ ಸಮಸ್ಯೆ ಬಗೆಹರಿಸಬೇಕು. ಇದೆಲ್ಲ ನೋಡಿದರೆ, ಸರ್ಕಾರಕ್ಕೆ ಈ ಸಮಸ್ಯೆ ಪರಿಹಾರ ಮಾಡೋ ಇಷ್ಟವಿಲ್ಲವೆಂಬಂತೆ ವರ್ತಿಸುತ್ತಿದೆ. ಅದಕ್ಕೆ ರಾಜಕೀಯ ಮಾಡುತ್ತಿದೆ. ಎಲ್ಲ ಪಕ್ಷಗಳು ಒಟ್ಟಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆ ವಿನಹ ಸರ್ಕಾರ ಕಾಟಾಚಾರಕ್ಕೆ ಬಜೆಟ್ ಮಂಡನೆ ಮಾಡಿದಂತಿದ್ದು ಜನರ ಅಭಿವೃದ್ದಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸರ್ಕಾರದ ವಿರುದ್ದ ಈಶ್ವರಪ್ವ ವಾಗ್ದಾಳಿ ನಡೆಸಿದರು. ಇದೇವೇಳೆ ವಿಧಾನಪರಿಷತ್ ನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್  ವಿಚಾರ ಪ್ರಸ್ತಾಪ ಕೂಡ ಆಯಿತು. ಈ ವಿಚಾರದಲ್ಲಿ,ಅಹಿಂದ ವರ್ಗದ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಈಶ್ವರಪ್ಪ ಪ್ರಸ್ತಾಪ ಮಾಡಿದರು.‌ ಈ ವೇಳೆ,ರಾಯಣ್ಣ ಬ್ರಿಗೇಡ್  ಉತ್ತಮ ಅಂಕ ಗಳಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ಉತ್ಸುಕತೆ ತೋರಿದೆ. ಸಮಾವೇಶ ಮಾಡಿ ಸಹಾಯಧನ ನೀಡುತ್ತೇವೆ ಎಂದು ಈಶ್ವರಪ್ಪ ಹೇಳಿದರು. ಆದರೆ ಈ ವೇಳೆ ಸಚಿವ ಆಂಜನೇಯ ಮಧ್ಯ ಪ್ರವೇಶ ಮಾಡಿ, ಮತ್ತೆ ಬ್ರಿಗೇಡ್ ಮಾಡೋದು ಬೇಡ ಅಂತ ಯಡಿಯೂರಪ್ಪ ಹೇಳಿದ್ದಾರಲ್ಲ ಎಂದು ಆಂಜನೇಯ ಕುಟುಕಿದರು. ಬ್ರಿಗೇಡ್ ವತಿಯಿಂದ ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡ್ತೀವಿ. ನಿಮಗೆ ಕಾರ್ಯಕ್ರಮಕ್ಕೆ ಬರೋ ತಾಕತ್ತಿದೆಯಾ ? ಎಂದು ಈಶ್ವರಪ್ಪ ಖಾರವಾಗಿ ನುಡಿದರು. ಮಾತ್ರವಲ್ಲ, ಬ್ರಿಗೇಡ್ ಸುದ್ದಿ ಗೆ ಯಾರ್ಯಾರು ಬರ್ತಾರೋ ಅವ್ರು ಹಾಳಾಗಿ ಹೋಗುತ್ತಾರೆ ಎಂದು ಈಶ್ವರಪ್ಪ ಗರಂ ಆದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಗೃಹ ಸಚಿವ ಪರಮೇಶ್ವರ, ಬ್ರಿಗೇಡ್ ಸುದ್ದಿಗೆ ಬಂದರೆ ಹಾಳಾಗಿ ಹೋಗ್ತಾರೆ ಅಂತೀರಿ..?!ಹಾಗಾದರೆ ಯಡಿಯೂರಪ್ಪ ಹಾಳಾಗ್ ಹೋಗ್ತಾರೆ ಅಂದ ಹಾಗಾಯ್ತು ಎಂದು ಪರಮೇಶ್ವರ್ ಈಶ್ವರಪ್ಪ ನವರ ಕಾಲೆಳೆದರು. ಈ ಸಮಯದಲ್ಲಿ ಈಶ್ವರಪ್ಪ, ಯಡಿಯೂರಪ್ಪ ಕೂಡಾ ಕಾರ್ಯಕ್ರಮಕ್ಕೆ ಬರ್ತಾರೆ ಕೇಂದ್ರದಿಂದ ಸಚಿವರೂ ಬರ್ತಾರೆ. ನಿಮಗೆ ಬರೋ ತಾಕತ್ತಿದೆಯಾ? ಎಂದು ಆಂಜನೇಯರಿಗೆ ಈಶ್ವರಪ್ಪ ಪ್ರಶ್ನಿಸಿದರು. ಮಾತು ಮುಂದುವರೆಸಿದ ಅವರು, ಅಹಿಂದ ವರ್ಗಕ್ಕೆ ನೀವೇನು ವಾರಸುದಾರರಾ? ಎಂದು ಕಾಂಗ್ರೆಸ್ ಸದಸ್ಯರನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಚಿವ ಪರಮೇಶ್ವರ್ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣಗೆ ನೇಣು ಹಾಕಿದ ಸ್ಥಳ ಅಭಿವೃದ್ಧಿಯಿಂದ ವಂಚಿತವಾಗಿದೆ. ಈಗ ರಾಯಣ್ಣನ ನೆನಪಾಯಿತೇ ಎಂದು ಕಾಲೆಳೆದರು.  ನಂತರ ಈಶ್ವರಪ್ಪನವರು‌ ರಾಯಣ್ಣ ಬ್ರಿಗೇಡ್ ತಂಟೆಗೆ ಬಂದ್ರೆ ಹಾಳಾಗಿ ಹೋಗ್ತೀರಾ ಎಂದರೆ, ಪರಮೇಶ್ವರ್ ಹಾಗಿದ್ರೆ ಬ್ರಿಗೆಡ್ ತಂಟೆಗೆ ಬಂದ ಯಡಿಯೂರಪ್ಪ ಕೂಡ ಹಾಳಾಗಿ ಹೋಗ್ತಾರಾ ಎಂದು ಎಟಿಗೆ ಎದಿರೇಟು ನೀಡಿದರು.

ಕಪ್ಪತಗುಡ್ಡ ಅರಣ್ಯ ಪ್ರದೇಶನ್ನು ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಿ.ಸರ್ಕಾರದ ನಡೆ ನೋಡಿದರೆ ಪ್ರಭಾವಿಗಳ ಕೈಯಲ್ಲಿ ಸಿಲುಕಿದೆ ಅನ್ನಿಸುತ್ತೆ  ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ತಕ್ಷಣ ಸರ್ಕಾರ ಅರಣ್ಯ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಬೇಕು.ಒಂದು ವೇಳೆ ಸರ್ಕಾರ ಘೋಷಣೆ ಮಾಡದಿದ್ದರೆ ಸಾಧು ಸಂತರೊಂದಿಗೆ ನಾವು ಸರ್ಕಾರದ ವಿರುದ್ದ ಹೋರಾಟ ಮಾಡ್ತೀವಿ. ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಪ್ರಭಾವಿಗಳ ಕೈಯಲ್ಲಿ ಇದೆ ಅನ್ನೋ ಈಶ್ವರಪ್ಪ ಮಾತಿಗೆ ಕಾಂಗ್ರೆಸ್ ನಾರಾಯಣಸ್ವಾಮಿ‌ ವಿರೋಧ ವ್ಯಕ್ತಪಡಿಸಿದರು. ನಮ್ಮ ಸರ್ಕಾರ ಯಾರನ್ನು ರಕ್ಷಣೆ ಮಾಡಿಲ್ಲ. ಜನಾರ್ದನ ರೆಡ್ಡಿಯವರಂತೆ ಲೂಟಿ ಮಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.ನಾರಾಯಣ ಸ್ವಾಮಿ‌ಮಾತಿಗೆ ಧ್ವನಿಗೂಡಿಸಿದ ಉಗ್ರಪ್ಪ ಜನಾರ್ದನ ರೆಡ್ಡಿ ಹೆಸರು ಪ್ರಸ್ತಾಪಿಸಿ ಜೈಲಿಗೆ ಹೋಗಿದ್ದು ಯಾರು ಎಂದು ಪ್ರಶ್ನಿಸಿದರು.

ಉಗ್ರಪ್ಪ ಮಾತಿಗೆ ಬಿಜೆಪಿ ಸಂಕನೂರು, ಪುಟ್ಟಸ್ವಾಮಿಯಿಂದ ವಿರೋಧ ವ್ಯಕ್ತವಾಯಿತು. ಕಪ್ಪತಗುಡ್ಡ ಬಗ್ಗೆ ಮಾತಾಡದೆ ವಿಷಯ ಬೇರೆ ಮಾತಾಡ್ತಿರೋದು ಸರಿಯಲ್ಲ ಅಂತ ಬಿಜೆಪಿ ನಾಯಕರು ವಿರೋಧಿಸಿದರು. ಯಡಿಯೂರಪ್ಪ ಅವಧಿಯಲ್ಲಿ 1 ಲಕ್ಷಕೋಟಿ ಸಂಪತ್ತು ಲೂಟಿ ಹೊಡೆಯಲಾಗಿದೆ ಎಂದು ಉಗ್ರಪ್ಪ ಆರೋಪಿಸಿದರು. ಸದನದಲ್ಲಿ ಎರಡು ಪಕ್ಷಗಳ‌ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯರ ವರ್ತನೆಗೆ ಸಭಾಪತಿ ಆಕ್ರೋಶ ವ್ಯಕ್ತ ಪಡಿಸಿ ಜನರು ನೋಡುತ್ತಿದ್ದಾರೆ. ಅತ್ತೆ ಮನೆಯಲ್ಲಿ ಮಾತಾಡೋ ರೀತಿ ಮಾತಾಡ್ತಿದ್ದೀರಿ ಇದು ಸರಿಯಲ್ಲ ಎಂದು ಗದರಿದರು. ಯಡಿಯೂರಪ್ಪ ಮೇಲಿನ ಕೇಸ್ ಗಳನ್ನು ಕೋರ್ಟ್ ಕೈ ಬಿಟ್ಟಿದೆ. ಇಂದಿರಾಗಾಂಧಿಯನ್ನು ಜೈಲಿಗೆ ಹಾಕಿದರು. ಅವರು ನಿರಪರಾಧಿ ಅಂತ ಸಾಬೀತಾಗಿಲ್ಲ. ಈಶ್ವರಪ್ಪ‌ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಇಂದಿರಾ ಗಾಂಧಿ ಪರವಾಗಿ ಮಾತಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಎದ್ದು ನಿಂತರು.ಎರಡು ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: