ಮೈಸೂರು

ಗೂಡು ಸೇರಲು ಹೊರಟ ಉತ್ತರ ಪ್ರದೇಶದ ವಲಸಿಗರು: ಮೊಗದಲ್ಲಿತ್ತು ನಗು

ಮೈಸೂರು,ಮೇ 16-ಬದುಕು ಕಟ್ಟಿಕೊಳ್ಳಲು ಬೇರೆ ರಾಜ್ಯಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ವಲಸೆ ಬಂದಿದ್ದವರು ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲಸವೂ ಇಲ್ಲದೆ, ಊಟವೂ ಇಲ್ಲದೆ ಸಂಕಷ್ಟದಲ್ಲಿದ್ದವರ ಬಯಕೆ ಒಂದೇ ಆಗಿತ್ತು. ಅದು ತಮ್ಮ ಗೂಡು ಸೇರಿಕೊಳ್ಳುವುದು.

ಊರು ಸೇರಿಕೊಳ್ಳುವ ವಲಸೆ ಕಾರ್ಮಿಕರ ಬಯಕೆ ಇಂದು ಈಡೇರಿದೆ. ಮೈಸೂರಿನಿಂದ ವಿಶೇಷ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಹೊರಟವರ ಮೊಗದಲ್ಲಿ ಊರು ಸೇರಿಕೊಳ್ಳುತ್ತಿರುವ ನಗು ಎದ್ದು ಕಾಣುತ್ತಿತ್ತು. ಪುಟ್ಟ ಮಕ್ಕಳನ್ನು ಕರೆದುಕೊಂಡು, ಗಂಟು ಮೂಟೆ ಕಟ್ಟಿಕೊಂಡು, ಒಂದಷ್ಟು ಆಹಾರ ಜೊತೆಗೆ ನೀರಿನ ಬಾಟಲಿಗಳನ್ನು ಹಿಡಿದು ರೈಲ್ವೆ ನಿಲ್ದಾಣದತ್ತ ಆಗಮಿಸುತ್ತಿದ್ದ ದೃಶ್ಯಗಳನ್ನು ನೋಡುತ್ತಿದ್ದರೆ ಕೊರೊನಾ ಮಹಾಮಾರಿಯನ್ನು ಶಪಿಸುವಂತೆ ಮಾಡಿತು. ಇನ್ನು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಊರಿಗೆ ಹೊರಟ ಕುಟುಂಬಕ್ಕೆ ಸಹಾಯ ಮಾಡುತ್ತಿರುವ ದೃಶ್ಯ ಮೆಚ್ಚುಗೆಗೆ ಪಾತ್ರವಾಯಿತು.

ಇಂದು ನಗರದ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಖ್ ಪುರ್ ಗೆ ಸುಮಾರು 1500 ಮಂದಿಯನ್ನು ರೈಲಿನಲ್ಲಿ ಕಳುಹಿಸಿಕೊಡಲಾಯಿತು. ಇದಕ್ಕೂ ಮೊದಲು ನಗರದ ವಿವಿಧೆಡೆಗಳಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರನ್ನು ಬಸ್ ಗಳ ಮೂಲಕ ಅಶೋಕಪುರಂ ರೈಲ್ವೆ ಮೈದಾನಕ್ಕೆ ಕರೆತಂದು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಸೇರಿದಂತೆ ವಿವಿಧ ತಪಾಸಣೆಗಳನ್ನು ಮಾಡಿದ ಬಳಿಕ ತೆರಳಲು ಅವಕಾಶ ಮಾಡಿಕೊಡಲಾಯಿತು. ಜೊತೆಗೆ ಊರಿಗೆ ತೆರಳಲು ಸೇವಾ ಸಿಂಧು ಮೂಲಕ ನೋಂದಣಿ ಮಾಡಿಸಿಕೊಂಡಿಲ್ಲದ ವಲಸೆ ಕಾರ್ಮಿಕರಿಗೆ ಸ್ಥಳದಲ್ಲೇ ನೋಂದಣಿ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.

ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉತ್ತರ ಪ್ರದೇಶದ ಗೋರಖ್ ಪುರ್ ಗೆ ತೆರಳಲು 1500 ಮಂದಿ ಕೂರುವ ಸಾಮರ್ಥ್ಯವಿರುವ ಒಂದು ರೈಲು ಇಂದು ಮೈಸೂರಿನಿಂದ ಹೊರಟಿದೆ. ಜಿಲ್ಲೆಯಲ್ಲಿ ಸೇವಾ ಸಿಂಧು ಮೂಲಕ 2 ಸಾವಿರ ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಅದರಲ್ಲಿ 1500 ಮಂದಿಯನ್ನು ಇಂದು ಕಳುಹಿಸಿಕೊಡಲಾಗುತ್ತಿದೆ ಎಂದರು.

ಸೇವಾ ಸಿಂಧು ಮೂಲಕ ನೋಂದಣಿ ಮಾಡಿಕೊಂಡವರ ಬಳಿ ಮಾಹಿತಿ ಪಡೆದುಕೊಂಡು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿ ಟಿಕೆಟ್ ನೀಡಲಾಗುವುದು. ನೋಂದಣಿಯಾಗದಿದ್ದವರ ನೋಂದಣಿಯನ್ನು ಸ್ಥಳದಲ್ಲೇ ಮಾಡಿಕೊಳ್ಳಲಾಯಿತು. ಟಿಕೆಟ್ ದರ ಒಬ್ಬರಿಗೆ ಸುಮಾರು 900 ರೂ. ಇದೆ. ಇವರಿಗೆ ಒಂದು ಹೊತ್ತಿನ ಊಟದ ಜೊತೆಗೆ ಕುಡಿಯುವ ನೀರನ್ನು ವಿತರಿಸಲಾಗುವುದು. ರೈಲ್ವೆ ನಿಲ್ದಾಣದೊಳಗೆ ರೈಲ್ವೆ ಸಿಬ್ಬಂದಿ ಮತ್ತು ಆರ್ ಪಿಎಫ್ ಅವರು ಸಂಬಂಧಪಟ್ಟ ಬೋಗಿಗಳಿಗೆ ಅವರನ್ನು ಕಳುಹಿಸಿಕೊಡುವ ಕಾರ್ಯ ಮಾಡಿದ್ದಾರೆ. ಉಳಿದವರನ್ನು ಮತ್ತೊಂದು ರೈಲಿನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಆಂಧ್ರ, ತಮಿಳುನಾಡು, ಕೇರಳಕ್ಕೆ ಹೋಗುವವರು ಸ್ವಂತ ವಾಹನಗಳ ಮೂಲಕ, ಬಾಡಿಗೆ ವಾಹನಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡು ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಿಕೊಡುತ್ತಿದ್ದಾರೆ. ನಮ್ಮಲ್ಲಿ ಎಚ್.ಡಿ.ಕೋಟೆ, ಹುಣಸೂರು ತಾಲೂಕುಗಳಲ್ಲಿ ಇದ್ದಾರೆ. ಕಾಲ್ನಡಿಗೆಯಲ್ಲೇ ಚಿಕ್ಕಮಗಳೂರು, ಹಾಸನ ಕಡೆಯಿಂದ ಬರುತ್ತಿದ್ದಾರೆ. ಹಳ್ಳಿ ರಸ್ತೆ ಮೂಲಕ ಬರುತ್ತಿದ್ದಾರೆ. ಚೆಕ್ ಪೋಸ್ಟ್ ಗಳನ್ನು ಕಣ್ತಪ್ಪಿಸಿ ಬರುತ್ತಿದ್ದಾರೆ. ಅವರು ಯಾವುದಾದರೂ ಊರಿಗೆ ಬಂದಾಗ ಊರಿನವರು ದೂರು ಕೊಟ್ಟಾಗ ನಮಗೆ ತಿಳಿಯುತ್ತದೆ. ಇಂತಹವರನ್ನು ಸುಮಾರು 80ಕ್ಕೂ ಹೆಚ್ಚು ಮಂದಿ ಪತ್ತೆಯಾಗಿದ್ದಾರೆ. ಅವರನ್ನು ತಮಿಳುನಾಡಿಗೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: