ಪ್ರಮುಖ ಸುದ್ದಿಮೈಸೂರು

ಬಹಳ ದಿನಗಳ ನಂತರ ರೋಡಿಗಿಳಿದ ಬಸ್ : ಬಸ್ ನಿಲ್ದಾಣದಲ್ಲಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ; ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ; ಬೇಡಿಕೆಗನುಗುಣವಾಗಿ ಬಸ್ ಓಡಿಸಲಾಗುವುದು ; ಅಧಿಕಾರಿಗಳ ಹೇಳಿಕೆ

ಮೈಸೂರು,ಮೇ.19:- ಮೈಸೂರಿನಲ್ಲಿ 50ದಿನಗಳ ಬಳಿಕ ಬಸ್ ಓಡಾಡಲಿದೆ. ಕೊರೋನಾ ವೈರಸ್ ಮಹಾಮಾರಿಯಿಂದ ಇಡೀ ಪ್ರಪಂಚವೇ ತಲ್ಲಣಗೊಂಡಿತ್ತು. ಅದಕ್ಕಾಗಿ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿತ್ತು. ಅದಕ್ಕೆ ಮೈಸೂರು ಕೂಡ ಹೊರತಾಗಿರಲಿಲ್ಲ. ಮೈಸೂರಿನಲ್ಲಿಯೂ 90 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಲಾಕ್ ಡೌನ್ , ಕಂಟೈನ್ ಮೆಂಟ್ ಜೋನ್, ಬಫರ್ ಜೋನ್ ಗುರುತಿಸಿಕೊಂಡು ಯಾವುದೇ ವಾಹನ ಸಂಚಾರಕ್ಕೆ ಆಸ್ಪದವಿರಲಿಲ್ಲ. ಇದೀಗ ಮೈಸೂರಿನಲ್ಲಿ 90 ಪಾಸಿಟಿವ್ ವ್ಯಕ್ತಿಗಳೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯಂತೆ ಇಂದಿನಿಂದ ಮೈಸೂರಿನ ಪ್ರಮುಖ ಬಡಾವಣೆಗಳಿಗೆ ಬಸ್ 50 ದಿನಗಳ ಬಳಿಕ ಎಂದಿನಂತೆ ಸಂಚರಿಸಲಿದೆ.

ಈ ಕುರಿತು ‘ಸಿಟಿಟುಡೆ’ ಯೊಂದಿಗೆ ಮೈಸೂರು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು  ಅವರು ಮಾತನಾಡಿ ಮೈಸೂರಿನಲ್ಲಿಂದು ಬಸ್ ಸಂಚಾರಕ್ಕೆ     ಅನುವು ಮಾಡಿಕೊಡಲಾಗಿದೆ. ಇಂದು ನಗರದಲ್ಲಿ 68 ಬಸ್ ಗಳು ಸಂಚರಿಸಲಿದೆ. ಪ್ರತಿಬಸ್ ನಲ್ಲಿ 30ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅವರು ಇಳಿಯುವ ಸ್ಥಳಗಳಲ್ಲಿಯೇ ಅವರನ್ನು ಇಳಿಸಲಾಗುವುದು ಎಂದರು.

ಪ್ರತಿಯೊಬ್ಬರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಬಸ್ ನಿಲ್ದಾಣಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಅವರು ಮಾರ್ಕ್ ಮಾಡಿದ ಜಾಗಗಳಲ್ಲಿಯೇ ನಿಲ್ಲಬೇಕು. ಅವರ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುವುದು. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು, ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು. ಬಸ್ ಒಂದು ನಗರಕ್ಕೆ ಹೋಗಿ ಬಂದ ನಂತರ ಸ್ಯಾನಿಟೈಸರ್ ಮಾಡಲಾಗುವುದು. ಓರ್ವ ಪ್ರಯಾಣಿಕರು ಇಳಿದಲ್ಲಿ, ಅಕಸ್ಮಾತ್ ಅಲ್ಲಿ ಮತ್ತೋರ್ವರು ಹತ್ತಲು ಪ್ರಯಾಣಿಕರು ಸಿದ್ಧರಿದ್ದಲ್ಲಿ ಅವರನ್ನು ಬಸ್ ನಲ್ಲಿ ಕರೆದೊಯ್ಯುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಸ್ ನಲ್ಲಿ ಪ್ರಯಾಣಿಸುವವರಿಗೆ ಸೀಟ್ ಗಳನ್ನು ನಿಗದಿಪಡಿಸಲಾಗಿದೆ. ಸೀಟ್ ಇದ್ದಲ್ಲಿ ಮಾತ್ರ ಅವರನ್ನು ಕರೆದೊಯ್ಯಲಾಗುತ್ತದೆ. ಇಲ್ಲದಿದ್ದಲ್ಲಿ ಕರೆದೊಯ್ಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ನಾಳೆಯೂ ಇದೇ ರೀತಿ ವ್ಯವಸ್ಥೆ ಮುಂದುವರಿಯಲಿದೆಯಾ ಎಂದು ಪ್ರಶ್ನಿಸಿದ್ದಕ್ಕೆ ಬರುವ ಪ್ರಯಾಣಿಕರ ಸಂಖ್ಯೆಯನ್ನು  ನೋಡಿ  ನಿರ್ಧರಿಸಲಾಗುವುದು. ಸರ್ಕಾರದಿಂದ ಬೇರೆ ಸೂಚನೆ ಬರುವವರೆಗೂ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಸಿಟಿ ಬಸ್ ನಿಲ್ದಾಣದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಭಾನುವಾರವೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತಾತಯ್ಯ ಪಾರ್ಕ್ ಎದುರು ಬಸ್ ಗಳು ನಿರ್ಗಮಿಸುತ್ತಿದ್ದ ಮಾರ್ಗವನ್ನು ಬಂದ್ ಮಾಡಿ ಅರಮನೆ ಬ್ರಹ್ಮಪುರಿ ಗೇಟ್ ಸಮೀಪದ ಮಾರ್ಗದಲ್ಲಿ ಮಾತ್ರ ನಿರ್ಗಮಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ನಗರದ ಎಲ್ಲ ಮಾರ್ಗಗಳಲ್ಲೂ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಮಾತನಾಡಿ ಇಂದು 10ರಿಂದ 12ಬಸ್ ಗಳನ್ನು ಬೆಂಗಳೂರು ಸೇರಿದಂತೆ ಬಿಡಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ ಗಳನ್ನು ಬಿಡಲಾಗುವುದು.  ಇಬ್ಬರು ಕುಳಿತುಕೊಳ್ಳುನ ಸೀಟ್ ನಲ್ಲಿ ಒಬ್ಬರು, ಮೂವರು ಕುಳಿತುಕೊಳ್ಳುವ ಸೀಟ್ ನಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ.  ಪ್ರಯಾಣಿಕರು ಬಸ್ ಹತ್ತುವುದಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್, ಕೈಗಳಿಗೆ ಸ್ನಾನಿಟೈಸರ್ ಹಾಕುವುದು ನಡೆಯಲಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.

ಬಸ್ ಡಿಪೋದಿಂದ ಹೋಗುವ ಮುನ್ನ ಮತ್ತು ಬಸ್ ಸಾಯಂಕಾಲ ಮರಳಿದಾಗ ಬಸ್ ನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುವುದು ಎಂದು ತಿಳಿಸಿದರು.

ಬಸ್ ಚಲಿಸದೇ ಸುಮಾರು 50ದಿನಗಳಾದ ಹಿನ್ನೆಲೆಯಲ್ಲಿ ಬಸ್ ಗಳನ್ನು ಪರಿಶೀಲಿಸಲಾಗಿದೆಯೇ, ಅರ್ಧಕ್ಕೆ ಕೈಕೊಟ್ಟು ನಿಂತುಕೊಳ್ಳುವುದು ಈ ರೀತಿ ಘಟನೆಗಳು ನಡೆಯಬಾರದಂತೆ ಏನಾದರೂ ವ್ಯವಸ್ಥೆ ಮಾಡಿದ್ದೀರಾ ಎಂದಿದ್ದಕ್ಕೆ ಹೌದು ಬಸ್ ಗಳನ್ನು ಕೂಲಂಕುಶವಾಗಿ ಚೆಕ್ ಮಾಡಿದ್ದೇವೆ. ಎಲ್ಲವೂ ಸರಿಯಾಗಿಯೇ ಇದೆ. ಸರಿಯಾಗಿರುವ ಬಸ್ ಗಳನ್ನೇ ಬಿಡಲಾಗುತ್ತಿದೆ ಎಂದರು.

ಒಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳಿಂದ ಬಹಳ ದಿನಗಳ ನಂತರ ಬಸ್ ಗಳು ರೋಡಿಗಿಳಿದಿವೆ. ಆದರೆ ಇನ್ನೂ ಶಾಲಾ ಕಾಲೇಜುಗಳು ಆರಂಭವಾಗದ ಹಿನ್ನೆಲೆಯಲ್ಲಿ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ತಕ್ಕಮಟ್ಟಿಗೆ ಕಂಡು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: