ಮೈಸೂರು

ಹೋಟೆಲ್ ಗಳಿಗೆ ಆರ್ಥಿಕ ಹೊಡೆತ ನೀಡಿದ ಕೊರೋನಾ : ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ ಬಾಗಿಲೆಳೆದ 4 ಸ್ಟಾರ್ ಹೋಟೆಲ್ ‘ಸದರ್ನ್ ಸ್ಟಾರ್’

ಮೈಸೂರು,ಮೇ.20:- ಕೊರೋನಾ ಮಹಾಮಾರಿ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ್ದು ವಿವಿಧ ಉದ್ಯಮಗಳಿಗೆ ಆರ್ಥಿಕ ಹೊಡೆತ ನೀಡಿದೆ.   ಹೋಟೆಲ್ ಉದ್ಯಮ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದು, ನಗರದ 4 ಸ್ಟಾರ್ ಹೋಟೆಲ್ ‘ಸದರ್ನ್ ಸ್ಟಾರ್’ ಮಂಗಳವಾರ ಅಧಿಕೃತವಾಗಿ ಬಾಗಿಲೆಳೆದಿದೆ.

ಮೂರೂವರೆ ದಶಕದಷ್ಟು ಹಳೆಯ ಹಾಗೂ ಪ್ರತಿಷ್ಠಿತ ಹೋಟೆಲ್  ಆಗಿರುವ  ಸದರ್ನ್ ಸ್ಟಾರ್ ಮಾತ್ರವಲ್ಲ ಹಲವು ಹೋಟೆಲ್‌ಗಳು ಈ ರೀತಿ ಆರ್ಥಿಕ ಹೊಡೆತಕ್ಕೆ ಸಿಲುಕಿ  ನಲುಗಿ ಹೋಗಿವೆ.

ಕೊರೋನಾ  ಬಂದ ನಂತರ ಕೇವಲ ಪಾರ್ಸಲ್ ಸೇವೆಗಳಿಗೆ ಮಾತ್ರ ಹೋಟೆಲ್‌ಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ  ಸ್ಟಾರ್ ಹೋಟೆಲ್ ಆಗಿರುವ ಸದರ್ನ್ ಸ್ಟಾರ್ ದೇಶ ವಿದೇಶದಿಂದ ಬರುವ  ಪ್ರವಾಸಿಗರು, ದೊಡ್ಡ ಸಭೆ, ಸಮಾರಂಭಗಳಿಂದ ಬರುವ ಆದಾಯವನ್ನು ನೆಚ್ಚಿಕೊಂಡಿತ್ತು.    ಸದ್ಯಕ್ಕೆ ಇಂಥ ಯಾವುದೇ ಚಟುವಟಿಕೆಗಳು ನಡೆಯದ  ಹಿನ್ನೆಲೆಯಲ್ಲಿ ಹಾಗೂ ಮುಂದೆ ಎಷ್ಟು ದಿನ ಲಾಕ್‌ಡೌನ್ ಮುಂದುವರಿಯುವುದೋ ಎಂಬ ಸ್ಪಷ್ಟ ಚಿತ್ರಣ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೋಟೆಲ್ ಅನ್ನು ಮುಚ್ಚಲಾಗಿದೆ.

ಹೋಟೆಲ್‌ನಲ್ಲಿ 200ಕ್ಕೂ ಹೆಚ್ಚು ನೌಕರರು ಇದ್ದು, ಅವರ ವೇತನ ಹಾಗೂ ನಿರ್ವಹಣೆಗೆ ಮಾಸಿಕ 40 ರಿಂದ 50 ಲಕ್ಷ ರೂ. ಅಂದಾಜು ವೆಚ್ಚವಾಗಲಿದೆ.  ಆದರೆ ಲಾಕ್‌ಡೌನ್ ಅವಧಿಯಲ್ಲಿ ನಯಾಪೈಸೆ ವರಮಾನ ಸ್ಟಾರ್ ಹೋಟೆಲ್‌ಗಳಿಗೆ ಬರುತ್ತಿಲ್ಲ. ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ರೂ.ವಿನಿಯೋಗಿಸುವ ಅನಿವಾರ್ಯತೆ ಇದೆ. ಸದರ್ನ್ ಸ್ಟಾರ್ ಹೋಟೆಲ್ ಕೇವಲ ಮೈಸೂರು ಮಾತ್ರವಲ್ಲದೆ ಬೆಂಗಳೂರು, ಹಾಸನ, ದಾವಣಗೆರೆ, ಬೆಳಗಾವಿಯಲ್ಲೂ ಇದರ ಘಟಕ ಹೊಂದಿದೆ. ಅಲ್ಲಿನ ನೌಕರರೂ ಇದೀಗ    ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಹೋಟೆಲ್ ಅನ್ನು ಅನಿವಾರ್ಯವಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಸೇವೆಯಿಂದ ಬಿಡುಗಡೆಗೊಳಿಸಿದ ಭತ್ಯೆ, ಬಾಕಿ ವೇತನ ಹಾಗೂ ಇತರ ಭತ್ಯೆಗಳನ್ನು ನಿಯಮ ಪ್ರಕಾರ ಪಾವತಿ ಮಾಡಲಾಗುವುದು ಎಂದು ಹೋಟೆಲ್ ಆಡಳಿತ ಮಂಡಳಿ ಭರವಸೆ ನೀಡಿದೆ. ಈ ಕುರಿತು ಪ್ರತಿಯೊಂದು ನೌಕರರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.

ಚಟುವಟಿಕೆಗೆ ಅವಕಾಶ ನೀಡಿ ಸರ್ಕಾರಕ್ಕೆ ಅಧಿಕೃತವಾಗಿ ತೆರಿಗೆ ಪಾವತಿ ಮಾಡಲಾಗುತ್ತಿದೆಯಾದರೂ ಹೋಟೆಲ್‌ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ.   ತೆರಿಗೆ ವ್ಯಾಪ್ತಿಗೆ ಬರದ ಫುಟ್‌ಪಾತ್ ವ್ಯಾಪಾರಕ್ಕೆ ಅವಕಾಶಕ್ಕೆ ಮಾಡಿಕೊಡಲಾಗುತ್ತಿದೆ. ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ  ನಮಗೂ ವಹಿವಾಟಿಗೆ ಅವಕಾಶ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಾವು ವ್ಯಾಪಾರ ನಡೆಸುತ್ತೇವೆ ಎನ್ನುತ್ತಾರೆ ಹೋಟೆಲ್ ಉದ್ಯಮಿಗಳು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ  ಕೇವಲ ಪಾರ್ಸಲ್ ಸರ್ವೀಸ್‌ನಿಂದ ಹೋಟೆಲ್ ಉದ್ಯಮವನ್ನು ಮುನ್ನಡೆಸಲು ಸಾಧ್ಯವಿಲ್ಲ. ಇದರಿಂದ ನಷ್ಟವೇ ಹೊರತು ಲಾಭ ಇಲ್ಲ. ಹೋಟೆಲ್‌ಗೆ ಬಂದು ಜನರಿಗೆ ಆಹಾರ ಸೇವಿಸುವ ಅವಕಾಶ ನೀಡದಿದ್ದರೆ ಜಿಲ್ಲೆಯಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಶೇ.30ರಷ್ಟು ಹೋಟೆಲ್‌ಗಳು ಮುಚ್ಚುವ ಮತ್ತು ಇದರಿಂದ ಹಲವು ನೌಕರರು ಬೀದಿಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ವ್ಯಾಪಾರಕ್ಕೆ ಅವಕಾಶ ನೀಡುವ ಮೂಲಕ ಹೋಟೆಲ್ ಉದ್ಯಮ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ಸಂಕಷ್ಟ ಪರಿಹಾರವಾಗಲು ಪೂರ್ಣ ಪ್ರಮಾಣದಲ್ಲಿ ಹೋಟೆಲ್ ತೆರೆಯಲು ಅವಕಾಶ ನೀಡುವ ಅಗತ್ಯವಿದೆ. ಹೋಟೆಲ್ ಉದ್ಯಮ ಬಂದ್ ಆಗಿರುವ ಹಿನ್ನೆಲೆಯಲ್ಲಿ ತರಕಾರಿ ಹಾಗೂ ಹಾಲಿನ ಬೇಡಿಕೆ ಕಡಿಮೆ ಆಗಿದ್ದು, ಇದು ರೈತರ ಆರ್ಥಿಕತೆಯ ಮೇಲೂ ಪರಿಣಾಮ ಬೀರಲು ಪ್ರಾರಂಭವಾಗಿದೆ. ಹೋಟೆಲ್ ಉದ್ಯಮ ಪ್ರಾರಂಭವಾದರೆ ರೈತರ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: