
ದೇಶಪ್ರಮುಖ ಸುದ್ದಿ
ಭೀಕರ ಅಂಫಾನ್ ಚಂಡಮಾರುತ: ಕೋಲ್ಕತ್ತಾ ವಿಮಾನ ನಿಲ್ದಾಣ ಜಲಾವೃತ
ಕೋಲ್ಕತ್ತಾ,ಮೇ 21-ಅಂಫಾನ್ ಚಂಡಮಾರುತದಿಂದಾಗಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಈ ಭೀಕರ ಚಂಡಮಾರುತಕ್ಕೆ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಗಂಟೆಗೆ 165 ಕೀ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಅಪಾರ ಪ್ರಮಾಣದಲ್ಲಿ ನಾಶ ನಷ್ಟವಾಗಿದೆ.
ಈ ನಡುವೆ ಕೋಲ್ಕತ್ತಾ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ವಿಮಾನ ನಿಲ್ದಾಣದಲ್ಲಿ ಮೊಣಕಾಲಿನವರೆಗೂ ನೀರು ತುಂಬಿಕೊಂಡಿದ್ದು, ರನ್ವೇ ಗೂ ನೀರು ನುಗ್ಗಿದೆ. ಚಂಡುಮಾರುತಕ್ಕೆ ವಿಮಾನ ನಿಲ್ದಾಣದ ಎರಡು ಹ್ಯಾಂಗರ್ಗಳು ಹಾನಿಯಾಗಿದೆ.
ಗಾಳಿಯ ಪ್ರಭಾವಕ್ಕೆ 40 ಟನ್ ಭಾರದ ವಿಮಾನಗಳು ಅಲುಗಾಡಿದೆ. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ 42 ವಿಮಾನಗಳು ಅಲುಗಾಡಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚಂಡುಮಾರುತದ ಮುನ್ಸೂಚನೆ ಬೆನ್ನಲ್ಲೇ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಚಂಡಮಾರುತ ಬಾಧಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನುನಡೆಸುತ್ತಿದೆ. ಕೊರೊನಾ ವೈರಸ್ ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನಿಂದ ಕೂಡಿದೆ ಎಂದು ಎನ್ಡಿಆರ್ಎಫ್ ಅಭಿಪ್ರಾಯಪಟ್ಟಿದೆ.
ಈ ಮಧ್ಯೆ ಒಡಿಶಾ ಕಡಲ ತೀರದ ಮೂಲಕ ಬಂಗಾಳವನ್ನು ಪ್ರವೇಶಿಸಿರುವ ಅಂಫಾನ್ ಪ್ರಭಾವ ಕಡಿಮೆಯಾಗಿದ್ದು, ಬಾಂಗ್ಲಾದೇಶದತ್ತ ಮುಖಮಾಡಿದೆ. ಕಳೆದ ಆರು ತಾಸಿನಲ್ಲಿ ಉತ್ತರ ಈಶಾನ್ಯ ದಿಕ್ಕಿನತ್ತ ಗಂಟೆಗೆ 27 ಕೀ.ಮೀ. ವೇಗದಲ್ಲಿ ಚಲಿಸುತ್ತಿದೆ. ಇದರ ಪರಿಣಾಮ ಅಸ್ಸಾಂ ಹಾಗೂ ಮೇಘಾಲಯದಲ್ಲೂ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. (ಎಂ.ಎನ್)