ಪ್ರಮುಖ ಸುದ್ದಿಮೈಸೂರು

ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆ ಚೆಕ್‌ಪೋಸ್ಟ್ ತೆರವು ಸಾಧ್ಯವಿಲ್ಲ : ಮಂಡ್ಯ, ಮಳವಳ್ಳಿಯಿಂದ ಬಂದವರಿಗೂ ಕ್ವಾರೆಂಟೈನ್ ಗೆ ಸೂಚಿಸಲಾಗಿದೆ : ಸಚಿವ ಎಸ್.ಟಿ.ಸೋಮಶೇಖರ್

5.00ಕೋಟಿ ಮೊತ್ತದ ಕಾಮಗಾರಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಚಾಲನೆ

ಮೈಸೂರು,ಮೇ.22:-  ಜ್ಯುಬಿಲಿಯೆಂಟ್ ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿರಬಹುದು. ನನಗೆ ಇನ್ನೂ ಆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಗೃಹಸಚಿವರು ಮೈಸೂರಿಗೆ ಬಂದ ಮೇಲೆ ಖಚಿತ ಮಾಹಿತಿ ಸಿಗಲಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಜ್ಯುಬಿಲಿಯೆಂಟ್ ಅಷ್ಟೇ ಅಲ್ಲ ಎಲ್ಲ ಕಾರ್ಖಾನೆಗೆ ಅನುಮತಿ ನೀಡಲಾಗಿದೆ. ಜ್ಯುಬಿಲಿಯೆಂಟ್ ವಿಚಾರದಲ್ಲಿ ಸರ್ಕಾರದ ಮಧ್ಯಪ್ರವೇಶ ಮಾಡಬೇಕಾಗಿತ್ತು. ಕಾರ್ಖಾನೆ ಆರಂಭಕ್ಕೆ ಜ್ಯುಬಿಲಿಯೆಂಟ್  ಕಾರ್ಖಾನೆಯವರೇ ಈ ಬಗ್ಗೆ ಮನವಿ ಮಾಡಿದ್ದರು. ಸದ್ಯಕ್ಕೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಮೈಸೂರಿನಲ್ಲಿ ಇವತ್ತು ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ. ಕೇವಲ 200 ಜನರ ವರದಿ ಬಾಕಿ ಇದೆ. ಈಗಾಗಲೆ 500 ಜನರ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಇಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ. 200 ಜನರ ವರದಿ ಬಂದ ನಂತರ ಗರ್ಭಿಣಿಯರು ಆರೋಗ್ಯ ಸಮಸ್ಯೆಯಿರುವವರ ಪರೀಕ್ಷೆ ನಡೆಸಲಾಗುವುದು ಎಂದರು.

ಚೆಕ್‌ಪೋಸ್ಟ್ ನಿರ್ಬಂಧ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ ಮೈಸೂರು ಜಿಲ್ಲೆಗೆ ಪ್ರತ್ಯೇಕ ನಿಯಮ ರೂಪಿಸಿ, ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆ ಚೆಕ್‌ಪೋಸ್ಟ್ ತೆರವು ಸಾಧ್ಯವಿಲ್ಲ  ಎಂದರು. ಅದರಲ್ಲೂ ಮಂಡ್ಯ ಭಾಗದ ಚೆಕ್‌ಪೋಸ್ಟ್ ಕಠಿಣಗೊಳಿಸಬೇಕು. ಈ ಸಂಬಂಧ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಲಾಗುವುದು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಮೂಲಕ ಮನವಿ ಸಲ್ಲಿಸಲಾಗುವುದು. ಮೇ 31ರವೆಗೂ ಚೆಕ್‌ಪೋಸ್ಟ್‌ನಲ್ಲಿ ಕಠಿಣ ತಪಾಸಣೆ ನಡೆಯಲಿ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಮಂಡ್ಯ ಮಳವಳ್ಳಿಯಿಂದ ಬಂದವರನ್ನು ತಪಾಸಣೆ ಮಾಡಿ ಕ್ವಾರಂಟೈನ್ ಮಾಡಿ ಎಂದಿದ್ದೇನೆ. ಮೈಸೂರಿಗೆ ಮತ್ತೆ ಕೊರೋನಾ ಹರಡದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬಸ್, ರೈಲಿನಲ್ಲೂ ಸಾಮಾಜಿಕ ಅಂತರ

ಬಸ್, ರೈಲು ಸಂಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ಪರೀಕ್ಷೆಗೊಳಪಟ್ಟವರು ಮಾತ್ರ ಈಗ ಹೆಚ್ವಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅಲ್ಲೂ ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಮದುವೆಗಳಿಗೆ 50 ಜನ ಮಾತ್ರ

ಮದುವೆ ಸಮಾರಂಭಗಳಿಗೆ ಸರ್ಕಾರದಿಂದ 50 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನಂಜನಗೂಡಿನಲ್ಲಿ ನಡೆದ ವಿವಾಹ ಸಮಾರಂಭದ ಮಾಹಿತಿ ಪಡೆದಿದ್ದೇನೆ. ಅಲ್ಲಿ 60 ಜನ ಮಾತ್ರ ಭಾಗವಹಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಭಾನುವಾರ ಮದುವೆಗಳು ಮೊದಲೇ ನಿಗದಿಯಾಗಿದ್ದರೆ ನೆರವೇರಿಸಿಕೊಳ್ಳಲಿ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

5.00ಕೋಟಿ ಮೊತ್ತದ ಕಾಮಗಾರಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಚಾಲನೆ

ಇದೇ ವೇಳೆ ಚಾಮರಾಜ  ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ, ಮಾದೇಗೌಡ ಸರ್ಕಲ್ ಹೆಬ್ಬಾಳ, ವಿಜಯನಗರ ರಿಂಗ್ ರಸ್ತೆಯ ಕಾಮಗಾರಿ 5.00ಕೋಟಿ ಮೊತ್ತದ ಕಾಮಗಾರಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಚಾಲನೆ ನೀಡಿದರು.  ಶಾಸಕ ಎಲ್ ನಾಗೇಂದ್ರ ಸಮ್ಮುಖದಲ್ಲಿ‌  ಗುದ್ದಲಿ ಪೂಜೆ ಕಾರ್ಯ ನೆರವೇರಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಮುಖಂಡರು, ನಗರ ಬಿಜೆಪಿ ಮುಖಂಡರು,ಅಧಿಕಾರಿಗಳು ಭಾಗಿಯಾಗಿದ್ದರು.

 ಮಾದರಿಯಾಗಬೇಕಿದ್ದ ಸಚಿವರಿಂದಲೇ ಮಾರ್ಗಸೂಚಿ ಉಲ್ಲಂಘನೆ

ಸಾರ್ವಜನಿಕರಿಗೆ ಮಾದರಿಯಾಗಬೇಕಿದ್ದ ಸಚಿವರೇ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಮೈಸೂರು ಉಸ್ತುವಾರಿ ಸಚಿವರ ಕಾರ್ಯಕ್ರಮದಲ್ಲಿ  ಸಾಮಾಜಿಕ ಅಂತರವೇ ಕಂಡು ಬರುತ್ತಿಲ್ಲ. ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಗುಂಪು ಗುಂಪು ಜನ ಸೇರಿದ್ದು ಕಂಡು ಬಂತು. (ಕೆ.ಎಸ್,ಎಸ್.ಎಚ್)

 

 

 

Leave a Reply

comments

Related Articles

error: