ಮೈಸೂರು

ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!

ಕೆಲವೊಂದು ಘಟನೆಗಳನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಆದರೆ ಅದನ್ನು ನಾವು ನಂಬಲೇ ಬೇಕಾದ ಸ್ಥಿತಿ ಎದುರಾಗುತ್ತವೆ. ನಂಬಲೇಬೇಕಾದ ವಿಚಿತ್ರ ಪ್ರಕರಣವೊಂದು ಮೈಸೂರಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನಡೆದಿದೆ.

ಖಾತೆದಾರ ತನ್ನ ಕ್ರೆಡಿಟ್‌ ಕಾರ್ಡ್ ಸೇವೆಯನ್ನು ಸ್ಥಗಿತಗೊಳಿಸಲು ಖಾತೆಯಲ್ಲಿ ಬಾಕಿಯಿದ್ದ 5 ಪೈಸೆಯನ್ನು ಚೆಕ್ ಮೂಲಕ ನೀಡಿರುವ ಅಪರೂಪದ ಘಟನೆ ಮೈಸೂರಿನ ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. ವಿಜಯನಗರದ ಮೊದಲ ಹಂತದ ನಿವಾಸಿ ಸತೀಶ್ ಎಂಬುವರು ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 25 ಸಾವಿರ ಠೇವಣಿ ಹಣ ಇಟ್ಟು 5 ವರ್ಷಗಳ ಹಿಂದೆ ಕ್ರೆಡಿಟ್‌ ಕಾರ್ಡ್ ಪಡೆದಿದ್ದರು. ಆದರೆ ಕ್ರೆಡಿಟ್‌ ಕಾರ್ಡ್ ಬಳಕೆ ದುಬಾರಿಯಾದ ಹಿನ್ನೆಲೆಯಲ್ಲಿ ಬೇಸತ್ತ ಸತೀಶ್ ತಮ್ಮ 25 ಸಾವಿರ ರೂ ಠೇವಣಿ ಇಟ್ಟಿದ ಹಣವನ್ನು ವಾಪಸ್‌ ಪಡೆದಿದ್ದಾರೆ.

ಬ್ಯಾಂಕಿನ ಸೂಚನೆ ಮೇರೆಗೆ ಐದು ಪೈಸೆ ಚೆಕ್

ಇನ್ನು ಕ್ರೆಡಿಟ್‌ ಕಾರ್ಡ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ನವರಲ್ಲಿ ಕೇಳಿದಾಗ ಕ್ರೆಡಿಟ್ ಕಾರ್ಡ್ ಸೇವೆಯನ್ನು ಪರೀಶಿಲಿಸಿದ್ದಾರೆ. ಬಳಿಕ ಬ್ಯಾಂಕ್‌ನವರು ನಿಮ್ಮ ಖಾತೆಯಲ್ಲಿ 5 ಪೈಸೆ ಬಾಕಿಯಿದೆ. ಅದನ್ನು ಪಾವತಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸಬಹುದು ಎಂದು ತಿಳಿಸಿದ್ದಾರೆ. ಇನ್ನು ಸತೀಶ್ ಬ್ಯಾಂಕ್‌ನವರು ತಮಾಷೆ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡು ಪುನ: ಬ್ಯಾಂಕ್‌ನವರನ್ನು ಕೇಳಿದಾಗ ಬ್ಯಾಂಕ್‌ನ ಹಣಕಾಸು ವ್ಯವಸ್ಥೆಯ ಪ್ರಕಾರ 5 ಪೈಸೆ ಬಾಕಿ ಪಾವತಿಸುವುದು ಅನಿರ್ವಾಯವೆಂದು ಹೇಳಿದ್ದಾರೆ.

5 ಪೈಸೆ ಈಗ ಚಲಾವಣೆಯಲ್ಲಿಲ್ಲ. ಈಗ 5 ಪೈಸೆಯನ್ನು ಎಲ್ಲಿಂದ ತರುವುದು ಎಂಬ ಜಿಜ್ಞಾಸೆಗೆ ಸಿಲುಕಿದ ಸತೀಶ್‌ಗೆ ಬ್ಯಾಂಕ್‌ನ ಸಿಬ್ಬಂದಿಯ ಸಲಹೆಯಂತೆ ಚೆಕ್ ಮೂಲಕ ಪಾವತಿಸಲು ಸೂಚಿಸಿದರು. ಅದರಂತೆ ಮಾರ್ಚ್ 18 ರಂದು ಚೆಕ್ ಮೂಲಕವೇ 5 ಪೈಸೆಯನ್ನು ಪಾವತಿಸಿದ್ದಾರೆ. ಈ ಪ್ರಕ್ರಿಯೆಗೆ 3 ರೂಪಾಯಿ ವೆಚ್ಚವಾಗಿದೆ ಎಂದು ಸತೀಶ್‌ ಹೇಳಿದ್ದಾರೆ.

ಐದು ಪೈಸೆಗೆ ಚೆಕ್ ನೀಡಿದ ಪ್ರಕರಣ ನಿಜಕ್ಕೂ ಅಪರೂಪವೇ ಹೌದಾದರೂ ಅಚ್ಚರಿಗೊಳಿಸಿದ್ದಂತೂ ಸತ್ಯ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: