ಕರ್ನಾಟಕಪ್ರಮುಖ ಸುದ್ದಿ

ಸಂಗೀತ ವಿದುಷಿ, ಉಭಯ ಗಾನ ವಿಶಾರದೆ ಶಾಮಲಾ ಜಿ. ಭಾವೆ ನಿಧನ

ಬೆಂಗಳೂರು,ಮೇ 22-ಸಂಗೀತ ವಿದುಷಿ, ಉಭಯ ಗಾನ ವಿಶಾರದೆ ಶಾಮಲಾ ಜಿ. ಭಾವೆ (80) ಇಂದು ನಿಧನರಾದರು.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಭಾವೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಾರ ಮನೆಗೆ ಕರೆತರಲಾಗಿತ್ತು.

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನಡೆಯಲಿವೆ. ಜನ ಸೇರುವುದಕ್ಕೆ ನಿರ್ಬಂಧವಿದೆ. ಅಭಿಮಾನಿಗಳು ಸಹಕರಿಸಬೇಕು ಎಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

1941 ಮಾರ್ಚ್ 14 ರಂದು ಬೆಂಗಳೂರಿನಲ್ಲಿ ಜನಿಸಿದ ಶ್ಯಾಮಲಾ ಜಿ.ಭಾವೆ ಅವರು, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಭಜನ್ ಮುಂತಾದ ಸಂಗೀತದ ಎಲ್ಲಾ ಪ್ರಾಕಾರಗಳಲ್ಲೂ ಅದ್ಭುತ ಗಾಯಕಿ, ಸಂಗೀತ ಸಂಯೋಜಕಿ, ಉಭಯ ಗಾನ ವಿಶಾರದೆಯಾಗಿದ್ದರು.

ತಂದೆ ಆಚಾರ್ಯ ಪಂಡಿತ್ ಗೋವಿಂದ್ ವಿಠಲ್ ಭಾವೆ, ತಾಯಿ ವಿದುಷಿ ಲಕ್ಷ್ಮಿ ಜಿ.ಭಾವೆ. ತಂದೆ ಗೋವಿಂದ ವಿಠಲ್ ಭಾವೆ 1930 ರಲ್ಲಿ ಶೇಷಾದ್ರಿಪುರದ ನೆಹರು ವೃತ್ತದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. 1930ರಲ್ಲಿ ‘ಅಮೆರಿಕನ್ ಕಾಲೋನಿ’ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶದಲ್ಲಿ ವಿದೇಶಿಯರೆ ವಾಸಿಸುತ್ತಿದ್ದರು. ಅನೇಕ ವರ್ಷಗಳ ನಂತರ ಶೇಷಾದ್ರಿಪುರ ಎಂದು ಹೆಸರಿಡಲಾಯಿತು. ಶಾಮಲಾ ಜಿ.ಭಾವೆ ಅವರು ಆರು ವರ್ಷದವರಿದ್ದಾಗಲೇ ಹಾಡುಗಾರಿಕೆ ಆರಂಭಿಸಿದರು.

ತಂದೆ ಗೋವಿಂದ್ ವಿಠಲ್ ಭಾವೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ವಿಷ್ಣು ದಿಗಂಬಾರ್ ಪಾಲುಸ್ಕರ್ ಅವರ ಬಳಿ ಅಭ್ಯಾಸ ಮಾಡಿದ್ದರು. ಗೋವಿಂದ್ ವಿಠಲ್ ಭಾವೆ ಸಂಗೀತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಪಾಲುಸ್ಕರ್ ಶುಲ್ಕ ಕೇಳಲಿಲ್ಲ. ತಮ್ಮ ವಿದ್ಯಾರ್ಥಿಗಳನ್ನು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಮತ್ತು ಹಿಂದೂಸ್ತಾನಿ ಸಂಗೀತಕ್ಕಾಗಿ ಶಾಲೆಯನ್ನು ಸ್ಥಾಪಿಸಲು ವಿನಂತಿಸಿದ್ದರು. ಗುರುಗಳ ಆಸೆಯಂತೆ ಗೋವಿಂದ್ ವಿಠಲ್ ಭಾವೆ ಅವರು ಸಂಗೀತ ಶಾಲೆ ಪ್ರಾರಂಭಿಸಿದರು.

ಅದೇ ಶಾಲೆಯಲ್ಲಿ ಶಾಮಲಾ ಜಿ.ಭಾವೆ ಸಂಗೀತಾಭ್ಯಾಸ ಮಾಡಿದ್ದರು. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತದಲ್ಲಿ ಶಾಮಲಾ ಜಿ ಭಾವೆ ಸಂಪೂರ್ಣ ಹಿಡಿತ ಸಾಧಿಸಿದರು. 1953ರ ವೇಳೆಗೆ ಶ್ಯಾಮಲಾ ಅವರು ತಂದೆಯ ಸಂಗೀತ ಶಾಲೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಹಿಂದೂಸ್ತಾನಿ ಸಂಗೀತದಲ್ಲಿ ಮುಳುಗಿರುವ ಕುಟುಂಬದಿಂದ ಬಂದ ಅವರು ಆರು ವರ್ಷದವರಿದ್ದಾಗಲೇ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದರು. (ಎಂ.ಎನ್)

Leave a Reply

comments

Related Articles

error: