ದೇಶ

ತೆಲಂಗಾಣ: ಬಾವಿಯಲ್ಲಿ 9 ವಲಸೆ ಕಾರ್ಮಿಕರ ಮೃತದೇಹ ಪತ್ತೆ

ಹೈದರಾಬಾದ್,ಮೇ 22-ಒಂದೇ ಕುಟುಂಬದ 6 ಮಂದಿ ಸೇರಿದಂತೆ 9 ವಲಸೆ ಕಾರ್ಮಿಕರ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರ್ರೆಗುಂಟಾ ಗ್ರಾಮದಲ್ಲಿ ನಡೆದಿದೆ.

ನಿನ್ನೆ 4 ಮೃತ ದೇಹಗಳನ್ನು ಹೊರತೆಗೆದಿದ್ದ ಪೊಲೀಸರು ಇಂದು ಮತ್ತೆ 5 ಹೆಣಗಳನ್ನು ಹೊರತೆಗೆದಿದ್ದಾರೆ. ಒಟ್ಟು 9 ಮಂದಿಯ ಮೃತ ದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಮೃತ ಕಾರ್ಮಿಕರ ಪೈಕಿ 6 ಮಂದಿ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಇಬ್ಬರು ಬಿಹಾರ ಮೂಲದವರೆಂದು ತಿಳಿದುಬಂದಿದೆ.

ಮೃತರನ್ನು ಮಕ್ಸೂದ್ (56), ಅವರ ಪತ್ನಿ ನಿಶಾ (48), ಪುತ್ರಿ ಬುಶ್ರಾ (24), ಮಕ್ಸೂದ್ ಅವರ 3 ವರ್ಷದ ಮೊಮ್ಮಗ ಎಂದು ಗುರುತಿಸಲಾಗಿದೆ. ಇವರೆಲ್ಲರ ಮೃತದೇಹಗಳನ್ನು ಗುರುವಾರ ಹೊರತೆಗೆಯಲಾಗಿತ್ತು. ಇಂದು ಮತ್ತೆ ಐದು ಮೃತ ದೇಹಗಳು ಪತ್ತೆಯಾಗಿದ್ದು, ಇಂದು ಮಕ್ಸೂದ್ ಅವರ ಮಗ, ಬಿಹಾರದ ಇಬ್ಬರು ವಲಸೆ ಕಾರ್ಮಿಕರು, ಓರ್ವ ಸ್ಥಳೀಯ ಮೃತದೇಹ ಸೇರಿದಂತೆ ಒಟ್ಟು ಐದು ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ಮೃತ ದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮೇಲ್ನೋಟಕ್ಕೆ ಇದು ಸಾಮೂಹಿಕ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಾದರೂ, ಸಾವಿನ ಹಿಂದಿನ ನಿಖರ ಕಾರಣ ಬಹಿರಂಗವಾಗಿಲ್ಲ. ಪ್ರಕರಣದ ತನಿಖಾ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕ ಬಳಿಕ ಮುಂದಿನ ತನಿಖಾ ಹಂತ ನಿರ್ಧರಿಸಲಾಗುತ್ತದೆ. ಮೃತದೇಹಗಳನ್ನು ಮಹಾತ್ಮಾ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ವರಂಗಲ್ ಪೊಲೀಸ್ ಆಯುಕ್ತ ವಿ ರವೀಂದ್ರ ಅವರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೀಸುಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)

Leave a Reply

comments

Related Articles

error: