ಮೈಸೂರು

ಕಸ ವಿಂಗಡಣೆ ಮಾಡದಿದ್ದಲ್ಲಿ ದಂಡ‌ ಖಂಡಿತ : ಪಾಲಿಕೆ ಎಚ್ಚರಿಕೆ

ಏಪ್ರಿಲ್ ಒಂದರಿಂದ ಮೈಸೂರು ಮಹಾನಗರ ಪಾಲಿಕೆಯಿಂದ ಹೊಸ ನಿಯಮವೊಂದು ಜಾರಿಗೆ ಬರುತ್ತಿದೆ. ಈ‌ ಯೋಜನೆಗೆ ಮೈಸೂರು ಜನತೆ ಸಿದ್ದರಾಗುತ್ತಿದ್ದಾರೆ ಅನಿಸುತ್ತಿದೆ. ಯಾಕೆಂದರೆ ಇದು ಈಗಿನ ಯೋಜನೆಯಲ್ಲ. ಈ ಯೋಜನೆ ಜಾರಿಗೆ ಬಂದು 3 ವರ್ಷಗಳೇ ಕಳೆದುಹೋಯಿತು. ಆದರೆ ಈಗ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ.

ಮೈಸೂರು ಮತ್ತಷ್ಟು ಸ್ವಚ್ಛ ಹಾಗೂ ಪವರ್ ಸೇವರ್ ಸಿಟಿ ಆಗಲು ದಾಪುಗಾಲಿಡುತ್ತಿದೆ. ಹಾಗಾದರೆ ಆ ಯೋಜನೆ ಏನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಯೋಜನೆ ಯಾವತ್ತೋ ಅಳವಡಿಸಲಾದ ಕಸ ವಿಂಗಡಣೆ.
ಏಪ್ರಿಲ್ ಒಂದರಿಂದ ಮೈಸೂರಿನಾದ್ಯಂತ ಕಸ ವಿಂಗಡಣೆ ಕಡ್ಡಾಯವಾಗಲಿದೆ ಎಂದು ಪಾಲಿಕೆ ಮೂಲಗಳು ಸಿಟಿಟುಡೇಗೆ ಮಾಹಿತಿ ನೀಡಿವೆ.

ಕಸ ವಿಂಗಡಣೆ ಮಾಡದಿದ್ದರೆ ಬೀಳಲಿದೆ ಭಾರಿ ಮೊತ್ತದ ದಂಡ

ನೀವು ಕಸ ವಿಂಗಡಣೆ ಮಾಡದೆ ಕಸವನ್ನು ನೀಡಿದರೆ  ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ. ಮೊದಲ ಬಾರಿಗೆ 500ರೂ, ಎರಡನೇ ಬಾರಿಗೆ ಸಾವಿರ ಹಾಗೂ ಮೂರು ಹಾಗೂ ಹೆಚ್ಚಿನದಕ್ಕೆ ಐದು ಸಾವಿರದವರೆಗೂ ದಂಡ ವಿಧಿಸಲಾಗುತ್ತದೆ. ಪಾಲಿಕೆ ಬೈಲಾದಲ್ಲಿ ದಂಡ ವಿಧಿಸಲು ಅವಕಾಶವಿದೆ.
ಈಗಾಗಲೇ ಮೈಸೂರಿನ ಕೆಲವು ಕಡೆ ಕಸ ವಿಂಗಡಣೆ ಯೋಜನೆ ಶುರುವಾಗಿದೆ. ಮೈಸೂರಿನ ವಾರ್ಡ್ ನಂಬರ್ 34ರ ಯಾದವಗಿರಿ, 28ರ ಕುಂಬಾರ ಕೊಪ್ಪಲು ಸೇರಿದಂತೆ ಕುವೆಂಪುನಗರದ ಕೆಲ‌ಕಡೆ ಈ ಯೋಜನೆ ಶುರುವಾಗಿದೆ. ಆದರೆ ಕುವೆಂಪುನಗರದಲ್ಲಿ ಈ ಯೋಜನೆ ಶೇ.95ರಷ್ಟು ವರ್ಕೌಟ್ ಆಗಿದ್ದು, ಮುಕ್ತಾಯ ಹಂತದಲ್ಲಿದೆಯಂತೆ.

ವೈಜ್ಞಾನಿಕವಾಗಿ ವಿಂಗಡಿಸಿದ್ದಲ್ಲಿ ಅನುಕೂಲ

ಈ ಕುರಿತು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ ಯೋಜನೆಯನ್ನುಏ.1 ರಂದು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದ್ದೇವೆ. ಕಸ ವಿಂಗಡಿಸಿದರೆ, ವೈಜ್ಞಾನಿಕವಾಗಿ ಗೊಬ್ಬರ ತಯಾರಿಕೆ, ಗ್ಯಾಸ್ ರಚನೆಗೆ ಅವಶ್ಯಕ ಆಗಲಿದೆ. ಈಗಾಗಲೇ ಮೈಸೂರಿನಾದ್ಯಂತ ಕೆಲ ಕಡೆ ನೈಸರ್ಗಿಕ ಅನಿಲ ಕಸದಿಂದ  ಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ಹಾಗೂ ಗ್ಲಾಸ್ ಗಳು ಕಸದ ಜೊತೆ ಸೇರಿಕೊಂಡರೇ ವಿಂಗಡಣೆ ಮಾಡೋದು ತುಂಬಾನೇ ಕಷ್ಟ. ಆದ್ದರಿಂದ ಜನರು ಎಚ್ಚೆತ್ತುಕೊಂಡು ಕಸ ವಿಂಗಡಣೆ ಮಾಡಿದರೆ ಕಸದಿಂದ ಗೊಬ್ಬರ ತಯಾರಿಕೆಗೂ ಸುಲಭ ಆಗಲಿದೆ ಎಂದು ತಿಳಿಸಿದರು.

ಸದ್ಯ ಈ ಯೋಜನೆ‌ ಜಾರಿಗೆ ಮುನ್ನವೇ ಕೆಲ‌ ಹೋಟೆಲ್‌ ಗಳಿಗೆ‌ ಕಸ ವಿಂಗಡಣೆ ಮಾಡದ ಕಾರಣ ಪಾಲಿಕೆಯಿಂದ ದಂಡ‌ ಬಿದ್ದಿದೆ. ಆದರೆ ಜನಸಾಮಾನ್ಯರಿಗೆ ತೊಂದರೆ ಆಗದಂತೆ, ಅರಿವು, ಜಾಥಾ ಮಾಡಿ ಆ ನಂತರ ದಂಡ ವಿಧಿಸಲು ಮುಂದಾಗುತ್ತೇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಮೈಸೂರಿಗರು ತಮ್ಮ ಅರಿವಿನಿಂದಲೇ ಎಚ್ಚೆತ್ತುಕೊಳ್ಳುತ್ತಾರಾ? ಅಥವಾ ದಂಡದಿಂದಲೇ ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.  (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: