
ಪ್ರಮುಖ ಸುದ್ದಿಮೈಸೂರು
ಅಂತಾರಾಜ್ಯದಿಂದ ಬಂದವರ ಕ್ವಾರಂಟೇನ್ , ಜನತೆ ಭಯಪಡಬೇಕಾಗಿಲ್ಲ : ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ. ಸೋಮಶೇಖರ್
ಗ್ರಾಮೀಣ ಜಿಲ್ಲಾ ಬಿಜೆಪಿ ಸಭೆಯಲ್ಲಿ ಪದಾಧಿಕಾರಿಗಳ ಜೊತೆ ಚರ್ಚೆ
ಮೈಸೂರು,ಮೇ.22:- ಅಂತಾರಾಜ್ಯದಿಂದ ಯಾರೇ ಬಂದರೂ 14 ದಿನ ಕ್ವಾರಂಟೇನ್ ಮಾಡಲಾಗುತ್ತಿದೆ. ಇನ್ನು ಮಂಡ್ಯದಿಂದ ಬರುವವರ ಮೇಲೂ ನಿಗಾವಹಿಸಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಜನ ಹೆದರಬೇಕಿಲ್ಲ. ಈ ವಿಷಯವನ್ನು ಕಾರ್ಯಕರ್ತರು ನಾಗರಿಕರಿಗೆ ಅರಿವು ಮೂಡಿಸಲಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರು ಜಿಲ್ಲಾ ಗ್ರಾಮೀಣ ಘಟಕದ ಪದಾಧಿಕಾರಿಗಳ ಸಭೆಯಲ್ಲಿಂದು ಮಾತನಾಡಿದ ಸಚಿವರು, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರಲು ಸುಮಾರು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವರಲ್ಲಿ 720 ಮಂದಿ ಮಾತ್ರ ಪ್ರವೇಶಿಸಿದ್ದು, 500 ಜನರ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಉಳಿದವರ ಪರೀಕ್ಷೆ ಆಗಬೇಕಿದೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಬರುವ ಜನರಿಗೆ ನೇರವಾಗಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡದಂತೆ ಗೃಹಮಂತ್ರಿಗಳ ಜೊತೆ ಮನವಿ ಮಾಡಿಕೊಂಡಿದ್ದೆ. ಹೀಗಾಗಿ ಅವರೂ ಸೂಚನೆ ನೀಡಿದ್ದು, ಈಗ ಪರೀಕ್ಷೆ ನಡೆಸಿ ವರದಿ ಬಾರದ ಹೊರತು ಅವರನ್ನು ಬಿಡುವಂತಿಲ್ಲ ಎಂದು ತಿಳಿಸಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ಲಾಭವೇ ಆಗುತ್ತದೆ. ನನ್ನ ಬೆಳೆ ನನ್ನ ಹಕ್ಕು ಎಂದು ರೈತ ಹೇಳಿಕೊಳ್ಳಬಹುದು. ಅಲ್ಲದೆ, ಎಪಿಎಂಸಿಗೆ ಇರುವ ಅಧಿಕಾರ ಮೊಟಕಾಗುವುದಿಲ್ಲ ಎಂದು ಸಚಿವರು ತಿಳಿಸಿದರು.
ನಾನು ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆ ಮಂತ್ರಿಗಳನ್ನೇ ಬರಲು ಹೇಳುತ್ತಿದ್ದೇನೆ. ಹಾಗಾಗಿ ಅವರೆಲ್ಲರೂ ಬಂದು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿದ್ದರೆ ಪಕ್ಷದ ಜಿಲ್ಲಾಧ್ಯಕ್ಷರ ಮೂಲಕ ಗಮನಕ್ಕೆ ತಂದರೆ ಆದ್ಯತೆ ಮೇಲೆ ಬಗೆಹರಿಸುವೆ ಎಂದು ಸಚಿವರು ತಿಳಿಸಿದರು.
ನಾಮ ನಿರ್ದೇಶನಗಳಿಗೆ ಜಿಲ್ಲಾ ಬಿಜೆಪಿ ಶಿಫಾರಸು
ನಾಮನಿರ್ದೇಶನಗಳು ಆಗಬೇಕಿದ್ದರೆ ಸಂಸದರು, ಶಾಸಕರು ಹಾಗೂ ಜಿಲ್ಲಾ ಬಿಜೆಪಿಯಿಂದ ಶಿಫಾರಸುಗಳನ್ನೊಳಗೊಂಡಿರಬೇಕು. ಆಗ ಮಾತ್ರ ನಾನು ಪರಿಗಣಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಟಿ.ಮಹೇಂದ್ರ ಮಾತನಾಡಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಚಿವರು ವಾರಕ್ಕೊಮ್ಮೆಯಂತೆ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುವ, ಸೂಚನೆಗಳನ್ನು ನೀಡುವ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿ ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಮಾಸ್ಕ್, ಆಹಾರ ಕಿಟ್, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಇದು ನಮ್ಮ ಸರ್ಕಾರ ಇದೆ ಎಂಬ ಕಾರಣಕ್ಕಾಗಿ ಮಾಡಿದ್ದಲ್ಲ. ಯಾವುದೇ ಸರ್ಕಾರ ಇದ್ದರೂ ನಮ್ಮ ಪಕ್ಷದವರು ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದರು. ಇದು ಪಕ್ಷದ ಸಂಸ್ಕೃತಿಯನ್ನು ತೋರುತ್ತದೆ ಎಂದು ಹೇಳಿದರು.
ಮೊದಲು ನನಗೆ ಪಕ್ಷ ಮುಖ್ಯ. ನೀವು ಸಭೆ ಕರೆದರೆ ನಾನು ಕಾರ್ಯಕರ್ತರು, ಪದಾಧಿಕಾರಿಗಳ ಜೊತೆ ಮಾತನಾಡುವೆ ಎಂದು ಉಸ್ತುವಾರಿ ಸಚಿವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ಇಂಥ ಸಚಿವರು ನಮಗೆ ಸಿಕ್ಕಿರುವುದು ಪುಣ್ಯ ಎಂದು ಹೇಳಿದರು.
ಮಾಜಿ ಸಚಿವರಾದ ಎಚ್.ವಿಶ್ವನಾಥ, ಕೋಟೆ ಎಂ.ಶಿವಣ್ಣ, ಸಿ.ಎಚ್. ವಿಜಯಶಂಕರ್, ಜಿಪಂ ಮಾಜಿ ಅಧ್ಯಕ್ಷ ಪುಟ್ಟಪರ್ತಿ ಇತರ ಪ್ರಮುಖರು ಇದ್ದರು. (ಕೆ.ಎಸ್,ಎಸ್.ಎಚ್)