ಪ್ರಮುಖ ಸುದ್ದಿಮೈಸೂರು

ಸೇಡಿನ ಮನೋಭಾವದಿಂದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ : ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ ಆರೋಪ

ಮೈಸೂರು,ಮೇ.23:-  ಸೇಡಿನ ಮನೋಭಾವದಿಂದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ ಆರೋಪಿಸಿದರು.

ಅವರಿಂದು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ನೀಡಿರುವ ಹೇಳಿಕೆಯೇ ಸಾಕ್ಷಿಯಾಗಿದೆ. ಅರ್ನಬ್ ಗೋ ಸ್ವಾಮಿ ವಿರುದ್ಧ ಕಾಂಗ್ರೆಸ್ ನವರು ಎಫ್.ಐ.ಆರ್ ದಾಖಲಿಸಿರುವುದನ್ನು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಹಾಗಾಗಿ ಸೇಡಿನ ಮನೋಭಾವದಿಂದ ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್  ಮಾತನಾಡಿ   ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿರುವ ವಿಚಾರದಲ್ಲಿ ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  ಸೋನಿಯಾಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಕೆ. ವಿ. ಪ್ರವೀಣ್ ಆರ್.ಎಸ್.ಎಸ್ ಕಾರ್ಯಕರ್ತನಾಗಿದ್ದು ಬಿಜೆಪಿಯಲ್ಲಿ ಗುರ್ತಿಸಿಕೊಂಡಿರುವ ವ್ಯಕ್ತಿ. ಪೊಲೀಸರ ಮೇಲೆ ಒತ್ತಡ ಹಾಕಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಆರ್.ಎಸ್.ಎಸ್ ನ ಪ್ರಮುಖರಾಗಿರುವ ಅಪ್ಪು ನಾರಾಯಣ ಅವರ ನಿರ್ದೇಶನದಂತೆ ಎಫ್.ಐ.ಆರ್ ದಾಖಲಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಪ್ರಭಾವೀ ಮುಖಂಡರು ಉನ್ನತ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಅನುಮತಿ ಪಡೆದು ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಹರಿಹಾಯ್ದರು.

ಅಷ್ಟಕ್ಕೂ ಪಿಎಂ ಕೇರ್ ಫಂಡ್ ಬಗ್ಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಟ್ವಿಟರ್ ನ್ನು ಕಾಂಗ್ರೆಸ್ ಪಕ್ಷ ನಿರ್ವಹಿಸುತ್ತಿದೆ. ಇದರಲ್ಲಿ ಸೋನಿಯಾಗಾಂಧಿ ಅವರ ಪಾತ್ರವೇನು ಇಲ್ಲ. ಈ ವಿಚಾರದಲ್ಲಿ ಕೂಲಂಕುಷ ತನಿಖೆಯಾಗಬೇಕು. ಸೋನಿಯಾಗಾಂಧಿ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ನ್ನು ಕೂಡಲೇ ರದ್ದು ಮಾಡಬೇಕು. ಬೇಜವಾಬ್ದಾರಿಯುತವಾಗಿ ನಡೆದುಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊರೋನಾ ಕೈ ಯಿಂದ ಹರಡುತ್ತದೆ, ಕಮಲದ ಹೂವಿನಿಂದ ಅಲ್ಲ ಎಂದು ಸಾಗರ ಪೊಲೀಸ್ ಠಾಣೆಯ ಎ.ಎಸ್.ಐ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಸಾಗರ ಪೊಲೀಸ್ ಠಾಣೆಯ ಎ.ಎಸ್.ಐ ಮೀರಾಬಾಯಿ ಈ ರೀತಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಬಳಸಿಕೊಂಡು ಎ.ಎಸ್.ಐ ಮೀರಾಬಾಯಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಮೀರಾಬಾಯಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠೀಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: