ಮೈಸೂರು

ಜೀವಜಲವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ : ಪ್ರೊ. ಆರ್. ರಾಜಣ್ಣ

ಮಾ.22 ವಿಶ್ವ ಜಲದಿನ. ಈ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು, ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ವಿಶ್ವಜಲದಿನವನ್ನು ಹಮ್ಮಿಕೊಳ್ಳಲಾಗಿತ್ತು.   ವಿದ್ಯಾರ್ಥಿಗಳು ಜೀವಜಲದ ಕುರಿತು ಜಾಗೃತಿ ಜಾಥಾ ನಡೆಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಆರ್.ರಾಜಣ್ಣ ಬಲೂನ್ ಹಾರಿ ಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನೀರು ಮನುಷ್ಯನಿಗೆ ಅತೀ ಅವಶ್ಯ. ನೀರನ್ನು ಹಿತಮಿತವಾಗಿ ಬಳಸಿ. ವೃಥಾ ಪೋಲು ಮಾಡಬೇಡಿ. ಜೀವಜಲವನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಬಹಳವಿದ್ದು, ನೈಸರ್ಗಿಕವಾಗಿ ಸಿಗುವ ನೀರನ್ನು ಉಳಿಸಿಕೊಂಡು ಹೋಗಬೇಕು. ಬೇರೆ ವಸ್ತುಗಳು ಖಾಲಿ ಆದಲ್ಲಿ ಖರೀದಿಸಬಹುದು. ಆದರೆ ನೀರು ಪ್ರಕೃತಿದತ್ತವಾಗಿ ಬಂದಿರುವುದು. ಅದನ್ನು ಖಾಲಿ ಮಾಡಿದರೆ ಮತ್ತೆ ನೀರು ಸಿಗಲಾರದು. ಅದರಿಂದ ಹನಿ ಹನಿ ನೀರಿನ ಬಳಕೆಯಲ್ಲಿಯೂ ಎಚ್ಚರಿಕೆ ಅಗತ್ಯ ಎಂದರು.

ಕಾಲೇಜು ವಿದ್ಯಾರ್ಥಿಗಳು ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಿದರು.  ರಾಮಸ್ವಾಮಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಿದರು. ಮಹಾರಾಜಾ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ಸಾಗಿ ಬಂತು. ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಅಧ್ಯಾಪಕ ವೃಂದ ಜಾಥಾದಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎನ್-ಎಸ್.ಎಚ್)

Leave a Reply

comments

Related Articles

error: