ಪ್ರಮುಖ ಸುದ್ದಿ

ರಾಜ್ಯದ ಕೊರೋನಾ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಚಾಮರಾಜನಗರ ಜಿಲ್ಲೆ

ರಾಜ್ಯ(ಚಾಮರಾಜನಗರ)ಮೇ.26:-  ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಹಸಿರಿನಿಂದ ಕಂಗೊಳಿಸುವ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡಿದ್ದು ರಾಜ್ಯದ ಕೊರೋನಾ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊರೋನಾ ಸೋಂಕು ಇರುವ ತಮಿಳುನಾಡು, ಕೇರಳ ಮತ್ತು ನಮ್ಮ ರಾಜ್ಯದ ಮೈಸೂರು, ಮಂಡ್ಯ  ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಜಿಲ್ಲೆಯಲ್ಲಿ ಒಂದೇ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ಮುಂದುವರೆದು ರಾಜ್ಯಕ್ಕೆ ಮಾದರಿಯಾಗಿದೆ.

ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ, ಅಧಿಕಾರಿ ವರ್ಗದ ಶ್ರಮ, ಜಿಲ್ಲೆಯ ಜನತೆಯ ಸಹಕಾರ ಹಸಿರು ವಲಯವಾಗಲು ಕಾರಣವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌. ಹಿಂದುಳಿದ ಜಿಲ್ಲೆ, ನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ  ಮೂಢನಂಬಿಕೆಗೆ ತುತ್ತಾಗಿದ್ದ ಗಡಿಜಿಲ್ಲೆ ಕೊರೋನಾ ವಿಚಾರದಲ್ಲಿ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.

ಇಲ್ಲಿಯವರೆಗೆ  ಒಂದೇ ಒಂದು ಕೊರೋನಾ ಕಾಣಿಸಿಕೊಳ್ಳದ ಜಿಲ್ಲೆಗಳಾಗಿ ರಾಮನಗರ ಹಾಗೂ ಚಾಮರಾಜನಗರ ಮಾತ್ರ ಇದ್ದವು. ಆದರೆ, ರಾಮನಗರಕ್ಕೆ ತಮಿಳುನಾಡಿನಿಂದ ಬಂದಿದ್ದ ಕುಟುಂಬದ ಒಂದು ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಚಾಮರಾಜನಗರ ಗುರುತಿಸಿಕೊಂಡಿದೆ. (ಕೆ.ಎಸ್,ಎಸ್.ಎಚ್)

 

 

 

Leave a Reply

comments

Related Articles

error: