ಮೈಸೂರು

ಎಡೆಬಿಡದೆ ಸುರಿದ ಧಾರಾಕಾರ ಮಳೆ ; ವಿದ್ಯುತ್ ಕಂಬ ಧರೆಗೆ ;ಹನಗೋಡಿನಲ್ಲಿ ಬಿತ್ತು ಆಲಿಕಲ್ಲು

 ಮೈಸೂರು,ಮೇ.26:- ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ಬರೋಬ್ಬರಿ ಒಂದು ಗಂಟೆಗಳ ಕಾಲ ಎಡೆಬಿಡದೆ ಬಿರುಗಾಳಿ, ಮಿಂಚು-ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ನಿನ್ನೆ ರಾತ್ರಿ ಸುರಿದ ಮಳೆ  ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಕೊಂಚ  ತಂಪೆರೆದಿದೆ. ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕೆಲವು ಗಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು. ವಿದ್ಯಾರಣ್ಯಪುರಂನ 1ನೇ ಮುಖ್ಯರಸ್ತೆಯ 4ನೇ ಅಡ್ಡ ರಸ್ತೆಯಲ್ಲಿ ಬಿರುಗಾಲಿಗೆ ಸಿಲುಕಿದ ತೆಂಗಿನ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ರಸ್ತೆಗೆ ಉರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಲ್ಲದೇ ಗೋಕುಲಂ, ಸರಸ್ವತಿಪುರಂ ಸೇರಿದಂತೆ ಹಲವೆಡೆ ಮರಗಳು ಉರುಳಿ ಬಿದ್ದಿವೆ. ರಾಮಾನುಜ ರಸ್ತೆ  , ಕಲ್ಯಾಣಗಿರಿ ಶಾರದಾದೇವಿ ನಗರ, ಬಸವೇಶ್ವರ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಒಳಚರಂಡಿ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಒಮ್ಮೆಲೇ ಧಾರಾಕಾರ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿದ್ದು ದ್ವಿಚಕ್ರವಾಹನ ಸವಾರರು ಪರದಾಡುವಂತಾಯಿತು.

ಜಿಲ್ಲೆಯ ವರುಣಾ ಮತ್ತು ಜಯಪುರ ಹೋಬಳಿಯಲ್ಲಿಯೂ ಮಳೇ ಚೆನ್ನಾಗಿ ಸುರಿದಿದ್ದು ಮುಂಗಾರು ಪೂರ್ವ ಬೆಳೆ ಸೊಂಪಾಗಿ ಬೆಳೆಯಲು ಸಹಾಯಕವಾಗಿದೆ. ಹಲವು ಗ್ರಾಮಗಳಲ್ಲಿ ಬತ್ತು ಹೋದ ಕೆರೆಗಳಲ್ಲಿ ನೀರು ಹರಿದು ಬಂದಿದೆ. ಗ್ರಾಮಾಂತರ ಭಾಗದಲ್ಲಿ ಬಿದ್ದ ಮಳೆಯಿಂದ ರೈತರು ಸಂತಸ ಪಟ್ಟಿದ್ದಾರೆ.

ಪಿರಿಯಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಸುರಿದಿದೆ.   ಹನಗೋಡು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆಕಲ್ಲು ಸಹಿತ ಉತ್ತಮ ಮಳೆಯಾಗಿದೆ.

ಮಳೆ ಸುರಿಯುತ್ತಿದ್ದ ವೇಳೆಯೇ ಹುಣಸೂರು ಮುಖ್ಯ ರಸ್ತೆಯಲ್ಲಿರುವ ಜಲದರ್ಶಿನಿ ಎದುರು ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಿಕ್ಕಪುಟ್ಟ ಗಾಯಗಳಾಗಿವೆ. ಎಂದು ವಿವಿಪುರಂ ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: