ಮೈಸೂರು

ವರುಣನ ಆರ್ಭಟದಿಂದ ತತ್ತರಿಸಿದ ಮೈಸೂರು ಜನತೆ ; ವಿವಿಮೊಹಲ್ಲಾದಲ್ಲಿನ ಮನೆಗಳಿಗೆ ನುಗ್ಗಿದ ನೀರು: ಕ್ರಮಕ್ಕೆ ಒತ್ತಾಯ

ಮೈಸೂರು, ಮೇ 26:- ನಿನ್ನೆ ಸುರಿದ ಸಿಡಿಲಬ್ಬರದ ವರ್ಷಧಾರೆಯಿಂದ ನಗರದ ಹಲವೆಡೆ ಮಳೆ ನೀರಿನ ಜೊತೆಗೆ ಒಳಚರಂಡಿ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ವಿ.ವಿ.ಮೊಹಲ್ಲದಲ್ಲಿರುವ 2ನೇ ಮುಖ್ಯ ರಸ್ತೆ ಇದಕ್ಕೆ ಭಿನ್ನವೇನಿಲ್ಲ. ತಮ್ಮ ಹಾಗೂ ಪಕ್ಕದ ಮನೆಯೊಳಗೆ ಏಕಾಏಕಿ ಸುರಿದ ವರ್ಷಧಾರೆಯಿಂದ ಕ್ಷಣಾರ್ಧದಲ್ಲಿ ನೀರು ಕಾಲುವೆಯಂತೆ ಹರಿದಿದೆ ಎಂದು ನೀರಾವರಿ ಇಲಾಖೆ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ.ಎಸ್.ಪ್ರಸಾದ್ ತಿಳಿಸಿದ್ದು, ಹೆಚ್ಚಿನ ಮಳೆ ಆರಂಭವಾಗುವ ಮುನ್ನ ಮನೆಗಳಿಗೆ ನೀರು ನುಗ್ಗುವುದನ್ನು ಸಂಬಂಧಿಸಿದ ಇಲಾಖೆಯವರು ತಪ್ಪಿಸುವ ಕ್ರಮ ಕೈಗೊಳ್ಳಬೇಕು ಎಮದು ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಮನೆಯಲ್ಲಿದ್ದ ಪದಾರ್ಥಗಳೆಲ್ಲವೂ ನಿಮಿಷಾರ್ಧದಲ್ಲಿ ಒದ್ದೆಯಾಗಿ ಮನೆಯವರಿಗೆ ದಿಕ್ಕು ತೋಚದೆ ಪರದಾಡುವಂತಾಯಿತು. ಸುಮಾರು 20ರಿಂದ 30 ಬಕೆಟ್‍ನಷ್ಟು ನೀರನ್ನು ಹೊರ ಹಾಕಲಾಯಿತು. ಈ ಮಧ್ಯೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತು. ದೂರವಾಣಿ ಸಂಪರ್ಕ ಮಾರ್ಗಗಳಿಗೆ ಸಿಡಿಲು ಬಡಿದ ಪರಿಣಾಮ ಮೈಸೂರು ನಗರಪಾಲಿಕೆ ದೂರಿನ ಸಂಖ್ಯೆ ಕಡಿತಗೊಂಡಿತು. ಇದರಿಂದ ಸಣ್ಣ ಮಳೆ ಬಂದರೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ನಗರಪಾಲಿಕೆ ಅಭಯ ತಂಡದವರಿಗೆ ತಿಳಿಸಿದರೆ, ಅರೆ-ಬರೆ ಕೆಲಸ ಮಾಡಿ ಹೊರಡುತ್ತಾರೆಯೇ ಹೊರತು ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದಿದ್ದಾರೆ.

ಇಲ್ಲಿರುವ ಕನ್ಸೂರೆನ್ಸಿ ಪೈಪ್‍ಗಳು 40 ರಿಂದ 50 ವರ್ಷಗಳಷ್ಟು ಹಳೆಯದಾಗಿದ್ದು, ಅದರ ವಿಸ್ತೀರ್ಣ ಬಹಳ ಕಿರಿದಾಗಿದೆ. ಸದರಿ ಪೈಪ್‍ಗಳನ್ನು ಬದಲಿಸಿ, ದೊಡ್ಡ ಗಾತ್ರದ ಪೈಪ್‍ಗಳನ್ನು ಅಳವಡಿಸುವುದರ ಜೊತೆಗೆ ಮ್ಯಾನ್‍ಹೋಲ್‍ಗಳ ಸಂಖ್ಯೆಯನ್ನು ಜಾಸ್ತಿ ಮಾಡಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈ ಭಾಗದ ನಗರಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಸದಸ್ಯರು ಈ ಸಮಸ್ಯೆಗೆ ಆದಷ್ಟು ಬೇಗ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: