ಮೈಸೂರು

ಬಿಸಿಲಿನ ತಾಪದಲ್ಲೂ ಬೈಕ್ ಸವಾರರಿಗಿನ್ನು ತಂಪು : ಸಂಶೋಧನೆಗೊಂಡಿದೆ ಬೈಕ್ ಛತ್ರಿ!

ಮಳೆಗಾಲದಲ್ಲಿ ಛತ್ರಿ ಹಿಡಿದು ಓಡಾಡೋರನ್ನು ನೋಡಿದ್ದೀವಿ. ಬಿಸಿಲ ಝಳಕ್ಕೆ ಸೂರ್ಯನಿಗೆ ಅಡ್ಡಲಾಗಿ ಛತ್ರಿ ಹಿಡಿದು ಓಡಾಡುವವರನ್ನು ನೋಡಿದ್ದೀರಿ ಆದರೆ ಬೈಕ್ ಚಾಲನೆ ಮಾಡುವವರು ಛತ್ರಿ ಹಾಕಿಸಿಕೊಂಡು ಓಡಾಡೋದನ್ನು ನೀವೆಲ್ಲಾದರೂ ನೋಡಿದ್ದೀರಾ? ಅಥವಾ ಬೈಕ್ ಲ್ಲಿ ಓಡಾಡೋರೊಬ್ಬರು ಛತ್ರಿ ಬಿಡಿಸಿ ಚಾಲನೆ ಮಾಡುತ್ತಾರೆ ಅಂತ ಕೇಳಿದ್ದೀರಾ ?  ಮೈಸೂರಿನಲ್ಲಿ ಬೈಕ್ ಸವಾರರೋರ್ವರು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ!

ಈ ಬಾರಿಯ ಬಿಸಿಲಿನ ತಾಪ ಈಗಾಗಲೇ 35ರ ಗಡಿ ತಲುಪಿದೆ. ಈ ಬಿಸಿಲಿನಿಂದ ಹೆಂಗಪ್ಪ ಬಚಾವ್ ಆಗೋದು. ಬೈಕ್ ನಲ್ಲಿ ಹೋದರೂ ಬಿಸಿಲಿನ ತಾಪ ತಡೆಯಲು ಸಾಧ್ಯವಿಲ್ಲ ಅಂತ ಜನರು ಸುಸ್ತಾಗಿದ್ದಾರೆ. ಆದರೆ ಹೀಗನ್ನುವವರಿಗೆ ಮೈಸೂರಿನಲ್ಲಿ ‌ಹೊಸದೊಂದು ಆವಿಷ್ಕಾರವಾಗಿದೆ. ಅದೇನು ಗೊತ್ತಾ?  ಬೈಕ್ ಛತ್ರಿ. ಈ ಬೈಕ್ ಛತ್ರಿಯನ್ನು ಮೈಸೂರಿನ ನಂದೀಶ್ ಅವರು ತಮ್ಮ ಆಕ್ಟೀವಾಗೆ ಹಾಕಿಸಿಕೊಂಡಿದ್ದಾರೆ. ಇದರಿಂದ ಬಿಸಿಲ ತಾಪ ತನಗೆ ತಟ್ಟಲ್ಲ ಎಂದು ಜಾಲಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದಾರೆ ನಂದೀಶ್.

ನಂದೀಶ್ ತಮ್ಮ ಆ್ಯಕ್ಟೀವಾದಲ್ಲಿ ಹೋಗುತ್ತಿದ್ದರೆ, ದಾರಿಯಲ್ಲಿ ನಡೆದಾಡುವ ಜನರಷ್ಟೇ ಅಲ್ಲ, ಬೈಕ್ ಸವಾರರೆಲ್ಲರೂ ನಂದೀಶ್ ಅವರನ್ನು ನೋಡಿ ವಾಹ್ ಸೂಪರ್ ಅಲ್ವಾ.? ಇವರಿಗೆ ಬಿಸಿಲಿನ ಬೇಗೆಯೆ ತಿಳಿಯುತ್ತಿಲ್ಲ ಎನ್ನುತ್ತ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಸಿಟಿಟುಡೆಯೊಂದಿಗೆ ಮಾತನಾಡಿದ ನಂದೀಶ್  ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಛತ್ರಿಯನ್ನು ಹಾಕಿಸಿಕೊಂಡಿದ್ದೇನೆ. ನನಗಂತೂ ತುಂಬಾನೇ ಆರಾಮ ಅನ್ನಿಸಿದೆ. ಛತ್ರಿ ನಿರ್ಮಿಸಲು  ಎರಡು ಸಾವಿರ ರೂ. ವೆಚ್ಚವಾಗಿದೆ. 60 ಕಿಲೋ ಮೀಟರ್ ವೇಗವಾಗಿ ಹೋದರೂ ಛತ್ರಿಗೆ ಯಾವುದೇ ತೊಂದರೆ ಇಲ್ಲ ಅಂತಾರೆ.

ದೀಪಕ್ ಅಶೋಕ್ ಚಾವ್ಲಾ

ಇದನ್ನು ತಯಾರಿಸಿದ ಮೈಸೂರಿನ ದೀಪಕ್ ಅಶೋಕ್ ಚಾವ್ಲಾ ಮಾತನಾಡಿ, ಇದು ಕರ್ನಾಟಕದಲ್ಲೇ‌ ಪ್ರಥಮ ಪ್ರಯೋಗ. ಇದನ್ನು ಆಂಧ್ರಪ್ರದೇಶದ ವಿಜಯವಾಡದಿಂದ ತರಿಸಲಾಗಿದೆ. ಅಲ್ಲಿ ನನ್ನ ಸಂಬಂಧಿ ಕುನಾಲ್ ಇದನ್ನು ಸಿದ್ಧಗೊಳಿಸುತ್ತಾರೆ. ಮುಂಚಿತವಾಗಿ ತಿಳಿಸಿದರೆ ಅವರಿಗೆ ಮಾಡಿಕೊಡುತ್ತೇವೆ. ಸದ್ಯ ಎರಡು ಆರ್ಡರ್ ಬಂದ ಕಾರಣ ನಾವು ಇದನ್ನು ಮಾಡಿದ್ದೇವೆ. ನಂದೀಶ್ ಅವರು ತಮ್ಮ ಆ್ಯಕ್ಟೀವಾಗೆ ಹಾಕಿಸಿಕೊಂಡಿದ್ದಾರೆ. 400 ರೂ ಫಿಟಿಂಗ್ ಗೆ ವೆಚ್ಚವಾದರೆ, 1600 ರೂ. ಆ ಛತ್ರಿಗೆ ವೆಚ್ಚವಾಗಲಿದೆ. ಮುಂದೆ ಹೆಚ್ಚಿನದಾಗಿ ಆರ್ಡರ್ ಬಂದರೆ ಹಾಕಿಕೊಡುತ್ತೇವೆ ಎಂದರು.

ಒಟ್ಟಿನಲ್ಲಿ ಬಿಸಿಲ ಬೇಗೆಗೆ ಈ‌ ನೂತನ ವಿಧಾನ ಸಖತ್ ವರ್ಕೌಟ್ ಆಗಿದೆ. ಎರಡು ಸಾವಿರ ರೂಗೆ ವ್ಯಯಿಸಿದರೂ ಪರವಾಗಿಲ್ಲ. ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಆರಾಮವಾಗಿ ಬೈಕ್ ನಲ್ಲಿ ತಿರುಗಾಡಲು ಸಂತಸ ನೀಡಲಿದೆ.

(ಎಸ್.ಎನ್-ಎಸ್.ಎಚ್)

Leave a Reply

comments

Related Articles

error: