ಪ್ರಮುಖ ಸುದ್ದಿ

ಎಲ್ಲ 21 ಡಿಸಿಸಿ ಬ್ಯಾಂಕ್ ಗಳ ಸ್ಥಿತಿ-ಗತಿ ಅಧ್ಯಯನಕ್ಕೆ ಸಹಕಾರ ಸಚಿವ ಎಸ್ ಟಿ ಎಸ್ ಸೂಚನೆ : ಖಾಸಗಿ ಇಲ್ಲವೇ ನಬಾರ್ಡ್ ಸಮತಿಯಿಂದ ಅಧ್ಯಯನ ನಡೆಸಿ ಶ್ರೇಣಿ ನೀಡಲು ಆದೇಶ

ರಾಜ್ಯ(ಬೆಂಗಳೂರು)ಮೇ.27:-  ರಾಜ್ಯದಲ್ಲಿರುವ ಎಲ್ಲ 21 ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಗಮ) ನ ಸಾಧನೆಗಳ ಪರಾಮರ್ಶೆಯಾಗಬೇಕಿದೆ. ಈ ನಿಟ್ಟಿನಲ್ಲಿ ಆಯಾ ಬ್ಯಾಂಕ್ ಗಳ ಪ್ರತ್ಯೇಕ ಶ್ರೇಣಿಗಳನ್ನು ಅಳೆಯುವ ಅಧ್ಯಯನವನ್ನು ಖಾಸಗಿ ತನಿಖಾ ಸಂಸ್ಥೆಗಳು ಇಲ್ಲವೇ ನಬಾರ್ಡ್ ಸಮಿತಿಗಳ ಮೂಲಕ ಮಾಡಿಸಿ ವರದಿ ನೀಡಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಗಳ ಸಮಸ್ಯೆಗಳು ಹಾಗೂ ಅವುಗಳ ಕಾರ್ಯನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಚಿವರು ಸೂಚಿಸಿದರು.

ಎಲ್ಲ ಡಿಸಿಸಿ ಬ್ಯಾಂಕ್ ಗಳ ವಿಭಾಗೀಯವಾರು ಸಭೆ ಕರೆದು, ಒಂದೊಂದೇ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆ ಮಾಡಬೇಕಿದೆ. ಆ ಮೂಲಕ ಬ್ಯಾಂಕ್ ಗಳ ಹಾಲಿ ಸ್ಥಿತಿಗತಿಗಳ ಬಗ್ಗೆ ಅರಿಯುವುದಲ್ಲದೆ, ಯಾವ ಬ್ಯಾಂಕ್ ಗಳು ಉತ್ತಮ ಸ್ಥಿತಿಯಲ್ಲಿವೆ? ಯಾವುದು ತುಂಬಾ ಹದಗೆಟ್ಟಿದೆ? ರೈತರಿಗೆ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯಕ್ಕೆ ಸಾಲ ಸಿಗುತ್ತಿದೆಯೇ? ಕೃಷಿ ಆಧಾರಿತ ಸಾಲ ವಿತರಣೆಯಲ್ಲಿ ಸಮಸ್ಯೆ ಇರುವ ಬ್ಯಾಂಕ್ಗಳು ಯಾವುದಾದರೂ ಇದೆಯೇ?  ಎಂಬಿತ್ಯಾದಿ ವಿಷಯಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಇದರ ಜೊತೆಗೆ ಬ್ಯಾಂಕ್ ಗಳ ಆಡಳಿತ ಮಂಡಳಿ ಅವ್ಯವಹಾರ, ಹಗರಣಗಳ ಬಗ್ಗೆಯೂ ತಿಳಿದುಕೊಂಡು, ಬ್ಯಾಂಕ್ ಹಾಗೂ ಸರ್ಕಾರಕ್ಕೆ ಬರಬೇಕಾದ ಹಣ ವಸೂಲಾತಿ ಬಗ್ಗೆಯೂ ಕ್ರಮವಹಿಸಲು ಅನುಕೂಲವಾಗುತ್ತದೆ. ಅಲ್ಲದೆ, ಬ್ಯಾಂಕ್ಗಳಲ್ಲಿ ಬಾಕಿ ಇರುವ ಕೇಸ್ ಗಳೆಷ್ಟು? ಬಾಕಿ ಉಳಿದಿರಲು ಕಾರಣಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸಚಿವರು ನಿರ್ದೇಶಿಸಿದರು.

ಆಸ್ತಿ ಹರಾಜಿಗೆ ಅಧಿಕಾರಿ ನೇಮಿಸಲು ಸೂಚನೆ

ಸಹಕಾರ ಇಲಾಖೆ ವ್ಯಾಪ್ತಿಯ ಬ್ಯಾಂಕ್ ಗಳ ಅವ್ಯವಹಾರಗಳ ಬಗ್ಗೆಕಟ್ಟುನಿಟ್ಟಿನ ಕ್ರಮವಹಿಸುವ ಅಗತ್ಯವಿದ್ದು, ತನಿಖೆ ವೇಳೆ ಯಾರು ಅವ್ಯವಹಾರ ನಡೆಸಿದ್ದಾರೆಂಬುದು ಸಾಬೀತಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶವಾದರೆ, ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ನಡೆಸುವ ಸಲುವಾಗಿಯೇ ಅಧಿಕಾರಿಯನ್ನು ನೇಮಿಸಿ ಎಂದು ಉನ್ನತಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ವಿಎಸ್ಎಸ್ಎನ್ ಸೊಸೈಟಿ ಗಣಕೀಕೃತ

ವಿಎಸ್ಎಸ್ಎನ್ ನ ಎಲ್ಲ 4500 ಸೊಸೈಟಿಗಳ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮುಖ್ಯವಾಗಿದೆ. ಹೀಗಾಗಿ ಇನ್ನು ಮುಂದೆ ಎಲ್ಲ ವ್ಯವಹಾರಗಳೂ ಗಣಕೀಕೃತವಾಗಬೇಕು. ಈಗಲೇ ಈ ವ್ಯವಸ್ಥೆ ಜಾರಿಗೆ ಬರಲಿ ಎಂದು ಸಹಕಾರ ಸಚಿವ ಸೋಮಶೇಖರ್ ಸೂಚನೆ ನೀಡಿದರು.

 ಜಾಗೃತದಳ ರಚನೆ

ವಿಎಸ್ಎಸ್ಎನ್ ಮತ್ತು ಸಹಕಾರ ವಲಯದಲ್ಲಿ ಲೆಕ್ಕಪರಿಶೋಧನೆಯನ್ನು ಕಾಲಕಾಲಕ್ಕೆ ನಡೆಸಬೇಕು. ಈ ಮೂಲಕ ವ್ಯವಹಾರವು ಪಾರದರ್ಶಕವಾಗಿ ನಡೆಸಲು “ಜಾಗೃತದಳ” ರಚಿಸುವಂತೆ ಸಚಿವರು ಆದೇಶ ನೀಡಿದರು.

ವ್ಯವಸ್ಥೆ ಗಟ್ಟಿಗೊಳ್ಳಲು ಕ್ರಮವಹಿಸಿ

ಸಹಕಾರ ಸಂಘಗಳ ವ್ಯವಸ್ಥೆಗೆ ನೂರು ವರ್ಷಗಳ ಇತಿಹಾಸವಿದೆ. ಇಲ್ಲಿ ಅಧ್ಯಕ್ಷರು ಹಾಗೂ ಸಚಿವರು ಇಂದು ಇದ್ದು, ನಾಳೆ ಹೋಗುತ್ತಾರೆ. ಆದರೆ, ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಳ್ಳಬೇಕೆಂದರೆ ನಾವು ಇದ್ದಷ್ಟು ದಿನ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಗಮನಹರಿಸಿ ಎಂದು ಸಚಿವರು ಸೂಚಿಸಿದರು.

ಗುಲ್ಬರ್ಗ ಡಿಸಿಸಿ ಬ್ಯಾಂಕ್ 92 ಕೋಟಿ ಅವ್ಯವಹಾರ ತನಿಖೆಗೆ ಸೂಚನೆ

ಗುಲ್ಬರ್ಗ ಡಿಸಿಸಿ ಬ್ಯಾಂಕ್ ನಲ್ಲಿ 92 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಆಡಳಿತ ಮಂಡಳಿ ಸದಸ್ಯರು ತಮ್ಮ ಹಿಂಬಾಲಕರಿಗೆ ಮತ್ತು ಸಂಬಂಧಿಕರಿಗೆ ನೀಡಿ ಅವ್ಯವಹಾರ ಮಾಡಿರುವ ಬಗ್ಗೆ ಸಭೆಯಲ್ಲಿ ಸಚಿವರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸಚಿವರು ಆದೇಶ ನೀಡಿದರು.

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇಲ್ಲಿ ಆಡಳಿತ ಮಂಡಳಿಯನ್ನು ವಜಾ ಮಾಡಿ ಅಡ್ಮಿನಿಸ್ಟ್ರೇಟಿವ್ ಹಾಕುವುದೇ ಸೂಕ್ತ. ಜಿಲ್ಲಾಧಿಕಾರಿ ಅವರನ್ನು ಅಡ್ಮಿನಿಸ್ಟ್ರೇಟರ್ ಅನ್ನಾಗಿ ನೇಮಕ ಮಾಡಿ, ಶೀಘ್ರ ಕ್ರಮ ಕೈಗೊಳ್ಳಿ. ಎಲ್ಲ ಹಣವನ್ನು ವಸೂಲಿ ಮಾಡುವ ಬಗ್ಗೆ ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು.

ಎಂತಹ ಸಂದರ್ಭ ಬಂದರೂ ಬ್ಯಾಂಕ್ ನ ನಿರ್ದೇಶಕರು ಹೇಳಿದ ಮಾತ್ರಕ್ಕೆ ಯಾವ ದಾಖಲೆಯೂ ಇಲ್ಲದೆ, ವ್ಯವಹಾರ ನಡೆಸಿದರೆ ಹೇಗೆ  ಎಲ್ಲದಕ್ಕೂ ಪಾರದರ್ಶಕತೆ ಮುಖ್ಯ. ಪ್ರತಿಯೊಂದನ್ನು ದಾಖಲೆ ಸಹಿತವಾಗಿ ವ್ಯವಹಾರ ನಡೆಸಬೇಕು ಎಂದು ಸಚಿವರು ಸೂಚಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್

2004ರಿಂದ 2013ರವರೆಗಿನ ಅವಧಿಯಲ್ಲಿ 62.72 ಕೋಟಿ ರೂಪಾಯಿ ಹಣದ ಅವ್ಯವಹಾರ ಆಗಿದ್ದು, ಇದರ ಬಡ್ಡಿಯೇ 59 ಕೋಟಿ ರೂಪಾಯಿಯಾಗಿದೆ. ಆದರೆ, ಇದರ ರಿಕವರಿ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, 13 ಜನ ನಿರ್ದೇಶಕರಲ್ಲಿ 8 ಮಂದಿಯಿಂದ ಅವ್ಯವಹಾರವಾಗಿದ್ದು, ಅವರ ಸದಸ್ಯತ್ವ ರದ್ದತಿಗೆ ಕ್ರಮವಹಿಸಲಾಗಿದೆ. ಅಲ್ಲದೆ, ಅವರ ಆಸ್ತಿ ಮುಟ್ಟುಗೋಲಿಗೆ ಅಟೆಸ್ಟ್ ಸಹಿತ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

 

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ಹಿಂದಿನ ಆಡಳಿತ ಮಂಡಳಿ ಮೇಲಿರುವ ಹಗರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ಯಾವ ರೀತಿ ಕ್ರಮ ತೆಗೆಕೊಂಡಿದ್ದೀರಿ. ಅವರಿಂದ ಹಣ ವಸೂಲಾತಿಗೆ ಏನೇನು ಕ್ರಮವನ್ನು ಅನುಸರಿಸಲಾಗಿದೆ. ಇಂಥವರಿಂದ ಮೊದಲು ವಸೂಲಾತಿ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಬಳಿಕ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್, ಮಂಡ್ಯ ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಹಕಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ನಾಗಲಾಂಬಿಕಾ ದೇವಿ, ನಿಬಂಧಕರಾದ ಪ್ರಸನ್ನ ಕುಮಾರ್, ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಇಲಾಖೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: