ಮೈಸೂರು

ನಾಡ ಹಬ್ಬ ಮೈಸೂರು ದಸರಾ ಮೇಲೂ ಕೊರೋನಾ ಸೋಂಕಿನ ಕರಿಛಾಯೆ : ದಸರಾ ಕುರಿತು ಸರ್ಕಾರ ನಡೆಸಿದೆಯಂತೆ ಚಿಂತನೆ

ಮೈಸೂರು,ಮೇ.28:-   ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನಾ ಮಹಾಮಾರಿಯಿಂದ  ಆರ್ಥಿಕತೆ, ಉದ್ಯಮಗಳು ಸೇರಿದಂತೆ ದೇಶದ ವಿವಿಧ ಸಾಂಸ್ಕೃತಿಕ ಆಚರಣೆಗಳಿಗೂ ಇದರ ಬಿಸಿ ತಟ್ಟಿದೆ. ಇದೀಗ ನಾಡ ಹಬ್ಬ ಮೈಸೂರು ದಸರಾ ಮೇಲೂ ಕೊರೋನಾ ಸೋಂಕಿನ ಕರಿಛಾಯೆ ಬಿದ್ದಿದೆ.

ಈ ವರ್ಷ ಮೈಸೂರಿನಲ್ಲಿ ಅದ್ಧೂರಿ ದಸರಾ ಆಚರಣೆ ಬೇಕೇ, ಬೇಡವೇ ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾತು ಸಿಎಂ ಕಚೇರಿ ಮೂಲಗಳಿಂದ ಕೇಳಿ ಬಂದಿದೆ. ಈ ಚರ್ಚೆಯಲ್ಲಿ ಹಲವು ವಿಚಾರಗಳ ಬಗ್ಗೆ ಗಮನಹರಿಸಿರುವ ಸರ್ಕಾರ, ಸಾಧಕ- ಬಾಧಕಗಳ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಮೈಸೂರಿನ ಅರಮನೆಯಲ್ಲಿ ಸಾಂಪ್ರದಾಯಿಕ ದಸರಾ ಆಚರಣೆಗಷ್ಟೇ ಆದ್ಯತೆ ಕೊಡುವುದು ಒಳಿತು ಅಂತ ಸರ್ಕಾರ ಆಲೋಚಿಸಿದೆ ಎನ್ನಲಾಗುತ್ತಿದ್ದು, ಹೀಗಾಗಿ ಆಯುಧ ಪೂಜೆ, ವಿಜಯದಶಮಿಯ ಬನ್ನಿ ಮಂಟಪದ ಪೂಜೆಗೆ ಮಾತ್ರ ಅವಕಾಶ ನೀಡಬಹುದು ಎನ್ನಲಾಗಿದೆ. ನವರಾತ್ರಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ತಾಯಿಗೆ ಆರ್ಚಕರ ನೇತೃತ್ವದಲ್ಲಿಯಷ್ಟೇ ಪೂಜೆ ನಡೆಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಸರಳ ದಸರಾ ಆಚರಣೆಯಿಂದ ಸರ್ಕಾರಕ್ಕೆ ಎರಡು ವಿಚಾರದಲ್ಲಿ ಅನುಕೂಲವಾಗಲಿದೆಯಂತೆ. ಒಂದು ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಅದ್ಧೂರಿ ದಸರಾ ವೆಚ್ಚಕ್ಕೆ ಬ್ರೇಕ್ ಹಾಕಿದಂತಾಗುವುದು. ಎರಡನೆಯದು ಸಾರ್ವಜನಿಕರು ಕೊರೋನಾ ಸೋಂಕಿನಿಂದ ದೂರ ಉಳಿಯಲು ಅನುಸರಿಸಬೇಕಾದ ಮಾರ್ಗಸೂಚಿ ಸಾಮಾಜಿಕ ಅಂತರವನ್ನು ಕಾಪಾಡುವ ಉದ್ದೇಶವಾಗಿದೆ. ಹೀಗಾಗಿ ದಸರಾ ಆಚರಣೆ ಮೂರ್ನಾಲ್ಕು ತಿಂಗಳು ಬಾಕಿಯಿರುವಾಗಲೇ ಇದರ ಸಾಧಕ- ಬಾಧಕಗಳ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿದೆ ಎಮದು ಹೇಳಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: