ಮೈಸೂರು

ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ತಮ್ಮ ಆರೋಗ್ಯದ ಕಡೆಯೂ ಗಮನ ಹರಿಸಬೇಕು : ಬೆಟಸೂರಮಠ್

ಮಹಿಳೆಯರು ತನ್ನ ಕುಟುಂಬಕ್ಕಾಗಿ, ತನ್ನವರಿಗಾಗಿ  ದಿನವಿಡೀ ಕೆಲಸ ಮಾಡುವುದರಿಂದ ಆರೋಗ್ಯ ಹದಗೆಡುತ್ತಿದ್ದು ಮಹಿಳೆಯರು ಆರೋಗ್ಯದೆಡೆಗೆ ಹೆಚ್ಚಿನ ಗಮನಕೊಡಬೇಕು ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಹಾಗೂ ಜ್ಞಾನಜ್ಯೋತಿ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಆರೋಗ್ಯದ ಬಗ್ಗೆ ತಜ್ಞ ವೈದ್ಯರಿಂದ ಅರಿವು ಹಾಗೂ ಸಮಾಲೋಚನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಗೆ ಸಹಿಷ್ಣುತೆ ಹೆಚ್ಚು. ದಿನದ 24ಗಂಟೆಗಳಲ್ಲಿ ತನ್ನ ಕುಟುಂಬಕ್ಕಾಗಿ 18ಗಂಟೆ ದುಡಿಯುತ್ತಾಳೆ. ಈ ನಡುವೆ ತನ್ನ ಆರೋಗ್ಯದ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಇದರಿಂದ ಆರೋಗ್ಯದ ಸಮಸ್ಯೆಯಾಗಿ ಕುಟುಂಬದವರಿಗೂ ತೊಂದರೆಯಾಗುತ್ತದೆ. ಹಾಗಾಗಿ ಕೆಲಸದ ಒತ್ತಡಗಳ ನಡುವೆಯೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ಆರೋಗ್ಯವಂತರಾಗಿದ್ದರೆ ಕುಟುಂಬಕ್ಕಾಗಿ ಇನ್ನಷ್ಟು ವರ್ಷ ದುಡಿಯಬಹುದು. ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಸದುಪಯೋಗಪಡೆದುಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ ಉತ್ತಮ ಸಮಾಜ ಸೇವೆಗಾಗಿ ಇಂದಿರಮ್ಮ, ರಶೀಮ್ ತಾಜ್, ಪವಿತ್ರ, ಶೋಭ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಹಿಳಾ ಸಂಘಟನೆಯ ಕರ್ನಾಟಕ ಜಂಟಿ ಕಾರ್ಯದರ್ಶಿ ಆಶಿತಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಜೆಎಸ್‍ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ವೈದ್ಯಕೀಯ ಅಧೀಕ್ಷಕ ಡಾ.ಗುರುಸ್ವಾಮಿ.ಎಂ, ಜ್ಞಾನಜ್ಯೋತಿ ಸಂಸ್ಥೆಯ ಗೌರವಾಧ್ಯಕ್ಷೆ ಎಂ.ಎ.ಹೇಮಲತ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: