ಮೈಸೂರು

ಪುರುಷರಿಗೆ ಸರಿಸಮಾನವಾದ ಸ್ಥಾನಮಾನ ಅವಕಾಶವನ್ನು ಸಮಾಜ ಸ್ತ್ರೀಯರಿಗೆ ನೀಡಿಲ್ಲ :ಡಿ.ರಂದೀಪ್

ಮಹಿಳೆಯರನ್ನು ಸಮಾಜದಲ್ಲಿ ಒಂದೆಡೆ ದೇವರಂತೆ ಪೂಜಿಸಿ, ಮತ್ತೊಂದೆಡೆ ದೌರ್ಜನ್ಯ ನಡೆಸುತ್ತಿರುವುದು ವಿಷಾದಕರ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಬೇಸರ ವ್ಯಕ್ತಪಡಿಸಿದರು.
ಬುಧವಾರ ಮೈಸೂರಿನ ಪುರಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಹಾಗೂ ಧ್ವನಿ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಮಹಿಳೆ ಅಂದಿನಂತೆ ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ. ಎಲ್ಲಾ ರಂಗಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಸೇನೆಯಲ್ಲಿ ಪುರುಷರಂತೆ ಶತ್ರುಗಳ ವಿರುದ್ಧ ಹೋರಾಡುತ್ತಾಳೆ. ಬಾಹ್ಯಾಕಾಶ ಕ್ಷೇತ್ರದಲ್ಲೂ  ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ. ಆದರೂ ಪುರುಷರಿಗೆ ಸರಿಸಮಾನವಾದ ಅವಕಾಶ ಹಾಗೂ ಸ್ಥಾನಮಾನಗಳನ್ನು ಸಮಾಜ ನೀಡಿಲ್ಲ. ಇದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯವೂ ಮಹಿಳಾ ದಿನಾಚರಣೆಯಾಗಬೇಕು. ಅಲ್ಲದೆ ಕೇವಲ ಭಾರತಕ್ಕೆಮಾತ್ರ  ಮಹಿಳಾ ದಿನಾಚರಣೆಯ ಅಗತ್ಯತೆ ಇದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಸೇರಿದಂತೆ ಸರ್ಕಾರಿ ಕೆಲಸಕ್ಕೆ ಸೇರುವುದರಲ್ಲೂ ಮಹಿಳೆಯರೇ ಮುಂದಿದ್ದಾರೆ. ಹಾಗಾಗಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮತಾ ವೇದಿಕೆ ಅಧ್ಯಕ್ಷೆ ಮೀರಾನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರಾಧಾ, ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟದ ಆನಂದ್, ಶಕ್ತಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಗಿರಿಜಮ್ಮ, ಧ್ವನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಶಾಹಿನ್ ತಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: