ಪ್ರಮುಖ ಸುದ್ದಿ

ಚಾಮರಾಜನಗರ ಜಿಲ್ಲಾ ಪಂಚಾಯ್ತಿ  ಅಧ್ಯಕ್ಷೆಯಾಗಿ ಎಂ. ಅಶ್ವಿನಿ ಅವಿರೋಧ ಆಯ್ಕೆ

ರಾಜ್ಯ(ಚಾಮರಾಜನಗರ)ಮೇ.30:- ಚಾಮರಾಜನಗರ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ನ ಎಂ. ಅಶ್ವಿನಿ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ.

ಅಧ್ಯಕ್ಷ  ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎಂ. ಅಶ್ವಿನಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮೈಸೂರು ವಿಭಾಗೀಯ  ಪ್ರಾದೇಶಿಕ  ಆಯುಕ್ತ ಜಯರಾಂ ಘೋಷಣೆ ಮಾಡಿದರು.

ಈ  ಹಿಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ಶಿವಮ್ಮ ಅವರು ಕಾಂಗ್ರೆಸ್ ಪಕ್ಷದಲ್ಲಿನ  ಆಂತರಿಕ  ಒಪ್ಪಂದದಂತೆ ರಾಜೀನಾಮೆ  ನೀಡಿದ್ದರಿಂದ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಕಳೆದ ನವೆಂಬರ್ ನಲ್ಲೆ ಶಿವಮ್ಮ ರಾಜೀನಾಮೆ ನೀಡಬೇಕಿತ್ತಾದರೂ ಒಳಜಗಳದಿಂದಾಗಿ ಶಿವಮ್ಮ ತಡವಾಗಿ ರಾಜೀನಾಮೆ ನೀಡಿದ್ದರು. ಖಾಲಿಯಾದ ಅಧ್ಯಕ್ಷ ಸ್ಥಾನಕ್ಕೆ  ಮಾರ್ಚ್ ತಿಂಗಳಲ್ಲೇ ಚುನಾವಣೆ ನಡೆಯಬೇಕಿತ್ತು. ಆದರೆ ಅಷ್ಟರಲ್ಲಿ ಲಾಕ್ ಡೌನ್ ಘೋಷಣೆ ಆಗಿದ್ದರಿಂದ  ಚುನಾವಣೆ ಮುಂದೂಡಲಾಗಿತ್ತು.

ಈ ನಡುವೆ ಅಧ್ಯಕ್ಷ ಸ್ಥಾನಕ್ಕೆ ಎಂ.ಅಶ್ವಿನಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದ ನಂತರ ಪ್ರಾದೇಶಿಕ ಆಯುಕ್ತರು ಅವರಿಗೆ  ಸೂಕ್ತ ರೀತಿಯಲ್ಲಿ ವೇದಿಕೆಗೆ ಆಹ್ವಾನಿಸಿ ಪುಷ್ಪಗುಚ್ಚ ನೀಡಿ ಗೌರವಿಸದೇ ಇದ್ದುದ್ದಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕ್ಷಮೆ ಕೋರುವತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಪರಿಶಿಷ್ಠ ವರ್ಗದ  ಮಹಿಳೆಗೆ ಅವಮಾನ ಮಾಡುತ್ತಿದ್ದೀರಿ, ಕ್ಯಾಬಿನೆಟ್ ಸ್ಥಾನಮಾನ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಅಪಮಾನ ಮಾಡಿದ್ದೀರಿ  ಎಂದು ಅವರು ಪ್ರಾದೇಶಿಕ ಆಯುಕ್ತರ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದರು. ಮದ್ಯಪ್ರವೇಶಿಸಿದ ಜಿಪಂ ಸಿಇಓ ಹರ್ಷಲ್ ಭೋಯರ್ ಅವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷೆ ಎಂ. ಅಶ್ವಿನಿ ಅವರನ್ನು ವೇದಿಕೆಗೆ ಆಹ್ವಾನಿಸಿ ಪುಷ್ಪಗುಚ್ಚ ನೀಡಿ ಅಭಿನಂದಿಸಿದ ನಂತರ ಪ್ರತಿಭಟನೆ ಕೈಬಿಡಲಾಯ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: