ಮೈಸೂರು

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ವೃತ್ತ ನಿರೀಕ್ಷಕ  ಶ್ರೀನಿವಾಸ್ ಕರೆ

ಮೈಸೂರು,ಮೇ.31:- ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಎಲ್ಲ ನಾಗರಿಕರ ಕರ್ತವ್ಯ ಎಂದು ಕೆ.ಆರ್. ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ಹೇಳಿದರು

ಅರಿವು ಸಂಸ್ಥೆ ವತಿಯಿಂದ ಇಂದು ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಂಜು ಮಳಿಗೆ ವೃತ್ತದಲ್ಲಿ ತಂಬಾಕಿಗೆ  ನೀರು ಹಾಕುವ ಮೂಲಕ ವಿಶೇಷವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ತಂಬಾಕು ಉತ್ಪನ್ನಗಳಿಗೆ ನಿರಾಕರಿಸುವ ಮೂಲಕ ವಿಶ್ವ ತಂಬಾಕು ರಹಿತ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ವ್ಯಕ್ತಿ ವ್ಯಸನ ಮಾಡದಿದ್ದರೆ ಆರೋಗ್ಯದಿಂದ ಇರುತ್ತಾನೆ .ವ್ಯಸನಕ್ಕೆ ದಾಸನಾಗಿದ್ದರೆ ಮನುಷ್ಯ ಕೆಲಸ ನಿರ್ವಹಿಸಲು  ಅಶಕ್ತನಾಗುತ್ತಾನೆ .ಧರ್ಮಗ್ರಂಥ ವ್ಯಸನವನ್ನು ಬೆಂಬಲಿಸುವುದಿಲ್ಲ ಅಲ್ಲದೆ ಅದರಿಂದ ಯಾವುದೇ ಉಪಯೋಗವೂ ಇಲ್ಲ. ಇವುಗಳಿಂದ ಜೀವನ ಹಾನಿಯೇ ಹೆಚ್ಚು ಈ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ ಎಂದರು .

ಯುವಕರು ಆಧುನಿಕತೆಯ ಹೆಸರಲ್ಲಿ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.  ವ್ಯಸನ ಶರೀರವನ್ನು ಹಾಳು ಮಾಡುತ್ತದೆ. ಜತೆಗೆ ಹೀಗೆ ಮಾಡುವುದು ಕಾನೂನಿಗೂ  ವಿರುದ್ಧವಾದದ್ದು.  ಶಿಕ್ಷಣದ ಧ್ಯೇಯ ವ್ಯಸನವಿಲ್ಲದ, ಆರೋಗ್ಯವಂತ ಹಾಗೂ ಸುಶಿಕ್ಷಿತ ನಾಗರಿಕರನ್ನು ಸೃಷ್ಟಿಸುವುದಾಗಿದೆ . ಆದ್ದರಿಂದ ಶಿಕ್ಷಕರು ಹಾಗೂ ಪೋಷಕರು  ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ತಂಬಾಕಿನಿಂದ ತಯಾರಾಗುವ ವಸ್ತುಗಳಿಗೆ  ಅನೇಕ ಪ್ರಕಾರದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ವ್ಯಕ್ತಿಯ ಮೆದುಳಿನ ಮೇಲೆ ವ್ಯತಿರಿಕ್ತ  ಪರಿಣಾಮ ಉಂಟಾಗುತ್ತದೆ.  ಧೂಮಪಾನ ಮಾಡುವುದರಿಂದ ವಿಶ್ವದಲ್ಲಿ ಪ್ರತಿ ವರ್ಷ 60 ಲಕ್ಷ ಜನರು ಮರಣ ಹೊಂದುತ್ತಿದ್ದಾರೆ.  ವ್ಯಸನ ಮುಕ್ತಿಗೆ ಚಿಕಿತ್ಸೆಯೂ ಇದೆ. ಯುವಕರಲ್ಲಿ ಬಲವಾದ ಇಚ್ಛಾಶಕ್ತಿ ಇದ್ದರೆ ಯಾವುದೇ ದುಶ್ಚಟ ಹಾಗೂ ದುರ್ಗುಣ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿದರು

ಕನ್ನಡ ಸಾಹಿತ್ಯ ಪರಿಷತ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ತಂಬಾಕಿನಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗಲಿದ್ದು ಈ ಬಗ್ಗೆ ಜನಜಾಗೃತಿ ಅಗತ್ಯ.  ವಿವಿಧ ಬಗೆಗಳಲ್ಲಿ  ತಯಾರಾಗುವ ತಂಬಾಕಿನ ಪ್ರಮಾಣ ಕಡಿಮೆಯಾದಲ್ಲಿ ಅದನ್ನು ಬೆಳೆಯುವ ಪ್ರಮಾಣ ಕಡಿಮೆಯಾಗುತ್ತದೆ ಎಂದರು . ಹಾಗೆ ಕೇಂದ್ರ ಸರ್ಕಾರ ತಂಬಾಕು ಮುಕ್ತ ಭಾರತ ಮಾಡಲು ಮುಂದಾಗಿರುವುದು ಶ್ಲಾಘನೆಯ ಎಂದು ಹೇಳಿದರು

ನಂತರ ಮಾತನಾಡಿದ ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಂಬಾಕು ಬಳಕೆಯಿಂದ ಬರುವ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು . ಅದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕ್ಯಾನ್ಸರ್ ಪೀಡಿತ ರೋಗಿಯಿಂದ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡಲು ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ  ಮಾಜಿ ನಗರ ಪಾಲಿಕಾ ಸದಸ್ಯರಾದ ಎಂಡಿ ಪಾರ್ಥಸಾರಥಿ, ಜಯಶಂಕರ್ ಸ್ವಾಮಿ, ಉದ್ಯಮಿ ಅಪೂರ್ವ ಸುರೇಶ್, ಅರಿವು ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್,ಶ್ರೀನಿವಾಸ್ ರಾಕೇಶ್ ,ರವಿತೇಜ ,ಮಧು ಎನ್ ಪೂಜಾರ್,ತೀರ್ಥಕುಮಾರ್ ಹರೀಶ್ ನಾಯ್ಡು,ಯದುನಂದನ್ , ಶಿವು,ಡಿಪೋ ನಟರಾಜ್ ,ಮೈ ಲಾ ವಿಜಯ್ ಕುಮಾರ್  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: