ಪ್ರಮುಖ ಸುದ್ದಿ

 ವಲಸೆ ಕಾರ್ಮಿಕರ ಬದಲಿಗೆ ಕನ್ನಡಿಗರಿಗೆ ಅವಕಾಶ ನೀಡಿ : ಟಿ.ಎಸ್. ನಾಗಾಭರಣ

ರಾಜ್ಯ(ಬೆಂಗಳೂರು)ಮೇ.31:- ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಕೊರೋನಾ ಕಾರಣದಿಂದ ತಮ್ಮ ರಾಜ್ಯಕ್ಕೆ ಹಿಂದಿರುಗಿದ್ದು ಆತಂಕಪಡುವ ಅಗತ್ಯವಿಲ್ಲ. ನೈಪುಣ್ಯತೆ ಹೊಂದಿರುವ ಸಾಕಷ್ಟು ಮಂದಿ ಸ್ಥಳೀಯ ಕನ್ನಡಿಗರಿದ್ದು, ಅವರನ್ನು ಬಳಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಮತ್ತು ಕಾರ್ಮಿಕ ಸಚಿವರಾದ   ಶಿವರಾಮ್ ಹೆಬ್ಬಾರ್ ಅವರುಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ   ಟಿ.ಎಸ್. ನಾಗಾಭರಣ ಅವರು ಪತ್ರ ಬರೆದಿದ್ದಾರೆ.

ವಲಸೆ ಕಾರ್ಮಿ‍ಕರನ್ನು ಮನವೊಲಿಸಿ ಕರೆತರುವ ಕೆಲಸ ಮಾಡಬೇಕು ಎನ್ನುವ ಉದ್ಯಮಿಗಳ ಅಭಿಪ್ರಾಯ ಸರಿಯಲ್ಲ. ನೈಪುಣ್ಯತೆ ಹೊಂದಿರುವ ಸಾಕಷ್ಟು ಮಂದಿ ಕನ್ನಡಿಗರಿದ್ದಾರೆ ಅವರಿಗೆ ಅವಕಾಶ ಕಲ್ಪಿಸಬೇಕು ಹಾಗೂ ಕನ್ನಡಿಗರಿಗೆ ಸೂಕ್ತ ತರಬೇತಿ ನೀಡಿ ಬಳಸಿಕೊಂಡಲ್ಲಿ ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳಲು ಮತ್ತು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಇದೊಂದು ಸುಸಂದರ್ಭ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ರಾಜ್ಯದ ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನೈಪುಣ್ಯತೆಯನ್ನು ಹೊಂದಿರುವವರು ಸಾಕಷ್ಟು ಮಂದಿ ಇದ್ದಾರೆ. ಅಲ್ಲದೆ ಮಹರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ ಮುಂತಾದೆಡೆಗೆ ವಲಸೆ ಹೋಗಿ ಶೋಷಣೆಗೆ ಸಿಲುಕಿರುವ ಕನ್ನಡಿಗರನ್ನು ಕರ್ನಾಟಕ ರಾಜ್ಯದಲ್ಲೇ ಬಳಸಿಕೊಂಡು ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ತ್ವರಿತವಾಗಿ ಆಗಬೇಕಿದೆ. ಕರ್ನಾಟಕದ ಜನರು ಶ್ರಮಜೀವಿಗಳು ಅವರುಗಳಿಗೆ ಉದ್ಯೋಗ ಕಲ್ಪಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಸಲಹೆ ನೀಡಿರುವ ನಾಗಾಭರಣ ಅವರು, ಕೊರೋನದಿಂದಾಗಿ ಅನ್ಯ ರಾಜ್ಯದಿಂದ ಬಂದಿದ್ದ ಕಾರ್ಮಿಕರು ಅವರವರ ರಾಜ್ಯಗಳಿಗೆ ತೆರಳಿದಂತೆ ಅನ್ಯ ರಾಜ್ಯಗಳಲ್ಲಿರುವ ನಮ್ಮವರು ಮರಳಿ ಬಂದಿದ್ದು ಅವರಿಗೆ ಉದ್ಯೋಗಾವಕಾಶ ನೀಡಿದಲ್ಲಿ ಮುಂದೆ ಆಗಬಹುದಾದ ವಲಸೆಯನ್ನು ಕೂಡ ತಡೆಯಬಹುದು ಎಂದಿದ್ದಾರೆ.

ಕರ್ನಾಟಕ ಸರ್ಕಾರವು ನೆರೆ ರಾಜ್ಯದ ಕಾರ್ಮಿ‍ಕರನ್ನು ನೆಚ್ಚಿಕೊಳ್ಳದೆ, ಪ್ರಸ್ತುತ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಿ ಬರಪೀಡಿತ ಉತ್ತರ ಕರ್ನಾಟಕದ ನಿರುದ್ಯೋಗಿ ಜನರಿಗೆ ಉದ್ಯೋಗ ಸಿಗುವಂತೆ ಮಾಡಬೇಕಿದೆ.   ಸ್ಥಳೀಯ ನಿರುದ್ಯೋಗಿಗಳಿಗೆ ಮರಗೆಲಸ, ಕಟ್ಟಡ ನಿರ್ಮಾಣಕ್ಕೆ ಪೂರಕವಾದ ಕೆಲಸ, ಎಲೆಕ್ಟ್ರೀಷಿಯನ್ ಮುಂತಾದ ಕಾರ್ಖಾನೆಗಳಿಗೆ ಅಗತ್ಯವಿರುವ ಕೌಶಲ್ಯ ತರಬೇತಿಗಳನ್ನು ನೀಡಿ ಬಳಸಿಕೊಳ್ಳುವಂತೆ ಕಾರ್ಮಿ‍ಕ ಸಚಿವರಿಗೆ ಸಲಹೆ ನೀಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: