ನಮ್ಮೂರುಮೈಸೂರು

ದಸರಾ ಉತ್ಸವದಲ್ಲಿ ಗಮನ ಸೆಳೆಯಲಿದೆ ಪುಷ್ಟ ಪ್ರದರ್ಶನ

ಹೂವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರ ಸುಕೋಮಲತೆಗೆ ಮಾರು ಹೋಗದವರೇ ಇಲ್ಲ. ನೋಡಿದರೆ ಮತ್ತೆ ಮತ್ತೆ ನೋಡುತ್ತಲೇ ಇರಬೇಕೆನಿಸುವಷ್ಟು ಸ್ನಿಗ್ಧ ಸೌಂದರ್ಯ ಅದರಲ್ಲಿ ಅಡಗಿದೆ. ಅಂತಹ ಸೌಂದರ್ಯವನ್ನು ಲಕ್ಷಗಟ್ಟಲೆ ನೋಡಿ ನಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳುವ ಸದಾವಕಾಶವೊಂದು ಸಿಕ್ಕಿಬಿಟ್ಟರೆ ! ಅಂತಹ ಒಂದು ಸುವರ್ಣಾವಕಾಶ ನಮಗೆ ಒದಗಿ ಬಂದಿದೆ. ದಸರಾ ಉತ್ಸವ ಪ್ರಯುಕ್ತ ನಜರಾಬಾದ್ ಬಳಿಯ ಕುಪ್ಪಣ್ಣ ಪಾರ್ಕ್ ನಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

1.5 ಲಕ್ಷದಿಂದ 2ಲಕ್ಷ ಗುಲಾಬಿ ಹೂವನ್ನು ಬಳಸಿ ಸಿದ್ಧಪಡಿಸಿದ ಗೇಟ್ ವೇ ಆಫ್ ಇಂಡಿಯಾ ಈ ಬಾರಿ ಗಮನ ಸೆಳೆಯಲಿದೆ. ಮತ್ತೊಂದು ಆಕರ್ಷಣೆ ಭಾರತೀಯ ಸೈನ್ಯದಲ್ಲಿ ಪರಿಚಯಿಸಲ್ಪಟ್ಟ ತೇಜಸ್ ಏರ್ ಕ್ರಾಫ್ಟ್,  ಮೂರನೆಯ ಆಕರ್ಷಣೆ ಪುರಾತನ ಕಾಲದ ಕಾರು. ನಾವು ಅಂಬಾಸಿಡರ್ ಕಾರಿನೊಂದಿಗೆ ಭಾವನಾತ್ಮಕವಾಗಿ ಬೆರೆತಿದ್ದೇವೆ. ಆದರೆ ಇಂದು ಆ ಕಾರುಗಳು ತಯಾರಾಗುತ್ತಿಲ್ಲ.  ಭಾರತೀಯ ಕಂಪನಿಯಾದ ಹಿಂದುಸ್ತಾನ್ ಮೋಟರ್ ಕಂಪನಿಯಲ್ಲಿ ತಯಾರಾಗುತ್ತಿದ್ದ  ಅಂಬಾಸಿಡರ್ ಕಾರು ನಿರ್ಮಾಣವೀಗ ಸ್ಥಗಿತಗೊಂಡಿದೆ. ಪುರಾತನವಾದ ಈ ಕಾರನ್ನು ಹೂವಿನಿಂದಲೇ ಸಿದ್ಧಗೊಳಿಸಲಾಗುವುದು ಎಂದು ಮೈಸೂರಿನ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದಿನೇಶ್ ತಿಳಿಸಿದರು.

ಸಿಟಿಟುಡೆಯೊಂದಿಗೆ ಮಾತನಾಡಿದ ಅವರು ಈ ಬಾರಿ ಪ್ರದರ್ಶನದಲ್ಲಿ ಕೆಲವು ಪರಿಕಲ್ಪನೆಗಳನ್ನಿಟ್ಟುಕೊಳ್ಳಲಾಗಿದೆ. ಮನೆಯ ಉದ್ಯಾನದ ಮಾದರಿಯಲ್ಲಿ ಹಾಗೂ ಕುಟೀರ, ಶಿಲೋದ್ಯಾನ, ಸಂಗೀತ ಕಾರಂಜಿಗಳನ್ನು ಉದ್ಯಾನವನದಲ್ಲಿ ಅಳವಡಿಸುವುದಲ್ಲದೇ ಅಲಂಕಾರಿಕ ಉದ್ಯಾನವನವನ್ನು ನಿರ್ಮಿಸಲಾಗುವುದು. ಮಿಕ್ಕಿಮೌಸ್,  ಡೊನಾಲ್ಡ್ ಡಕ್ , ಛೋಟಾ ಭೀಮ್ ಮಕ್ಕಳನ್ನಾಕರ್ಷಿಸಲಿದೆ ಎಂದರು.

ದೇವರಾಜ್ ಅರಸುರವರ 100ನೇ ಜನ್ಮೋತ್ಸವ ಪ್ರಯುಕ್ತ ಶ್ಯಾವಿಗೆಯಿಂದ ದೇವರಾಜ ಅರಸು ಪ್ರತಿಮೆ ನಿರ್ಮಿಸಲಾಗುವುದು. ತೋಟಗಾರಿಕೆಗೆ ಸಂಬಂಧಿಸಿದ ಆಹಾರಗಳ ಮಳಿಗೆಯು ತಲೆ ಎತ್ತಲಿದೆ. ಕಾವಾ ಕಲಾವಿದರನ್ನು ಆಹ್ವಾನಿಸಲಾಗಿದ್ದು ಅವರು ರಚಿಸಿದ ವರ್ಣಚಿತ್ರಗಳು ಗಮನ ಸೆಳೆಯಲಿದೆ. ಒಟ್ಟಿನಲ್ಲಿ ಈ ಬಾರಿ ಪುಷ್ಟ ಪ್ರದರ್ಶನ ಜನತೆಯನ್ನು ತನ್ನತ್ತ ಸೆಳೆಯುವುದು ನಿಶ್ಚಿತ ಎಂದು ತಿಳಿಸಿದರು.

ಪ್ರದರ್ಶನಕ್ಕಾಗಿ ಭರದಿಂದ ಸಿದ್ಧತಾಕಾರ್ಯ ನಡೆದಿದ್ದು, ಕಲ್ಲುಗಳನ್ನು ಬಳಸಿ ಪಕ್ಷಿಗಳ ಸ್ನಾನಕೊಳ, ತುಳಸಿಕಟ್ಟೆ, ನುಣುಪು ಕಲ್ಲುಗಳ ಉದ್ಯಾನವನಗಳು ರೂಪುಗೊಳಿಸಲಾಗುತ್ತಿದೆ. ಬೆಂಗಳೂರಿನ ಅರ್ಬನ್  ಗ್ರೀನ್ ಕಂಪನಿಯು ಶೋಕೇಸ್ ನ ತೆರೆದ ಮಾಳಿಗೆಯ ಉದ್ಯಾನವನದ ಪರಿಕಲ್ಪನೆಯನ್ನು ನೀಡಿದೆ ಎಂದು ತಿಳಿಸಿದರು.

ಅಕ್ಟೋಬರ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆಯನ್ನು ನೆರವೇರಿಸಲಿದ್ದು 12ದಿನಗಳ ಕಾಲ ಪ್ರದರ್ಶನ ಸಾರ್ವಜನಿಕರನ್ನು ತನ್ನತ್ತ ಸೆಳೆಯಲಿದೆ.

Leave a Reply

comments

Related Articles

error: