
ಮೈಸೂರು
ಉಪ್ಪಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಆರ್ಥಿಕವಾಗಿ ತೀರ ಬಡತನದಲ್ಲಿ ರುವವರಿಗೆ ಸರ್ಕಾರ ಆರ್ಥಿಕ ನೆರವು ನೀಡಲು ಒತ್ತಾಯ
ಮೈಸೂರು,ಜೂ.2:- ಉಪ್ಪಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಆರ್ಥಿಕವಾಗಿ ತೀರ ಬಡತನದಲ್ಲಿ ರುವವರಿಗೆ ಸರ್ಕಾರ ಆರ್ಥಿಕ ನೆರವು ನೀಡುವಂತೆ ಮೈಸೂರು ಜಿಲ್ಲಾ ಭಗೀರಥ ಉಪ್ಪಾರರ ಸಂಘದ ಅಧ್ಯಕ್ಷ ಎಸ್. ಯೋಗೀಶ್ ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಪ್ಪಾರ ಸಮಾಜದ ಜನರು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಜನಾಂಗದ ಬಹುತೇಕ ಜನರು ಕಾರ್ಮಿಕರು, ದಿನಗೂಲಿ ನೌಕರರೇ ಆಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಉಪ್ಪಾರ ಸಮಾಜಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಸಮಾಜಕ್ಕೆ ಯಾವುದೇ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ಆದ್ದರಿಂದ ನಿಗಮ ಮಂಡಳಿಗಳಲ್ಲಿ ಉಪ್ಪಾರ ಸಮಾಜದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕು. ಒಂದು ವೇಳೆ ಉಪ್ಪಾರ ಸಮಾಜವನ್ನು ಕಡೆಗಣಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಉಪ್ಪಾರ ನಿಗಮಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಿ ಈ ನಿಗಮ ಮಂಡಳಿಗೆ 50ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು. ಜನಾಂಗದ ಮುಖಂಡರನ್ನು ಗುರುತಿಸಿ ಎಂಎಲ್ ಸಿ ಮಾಡಬೇಕು. ಉಪ್ಪಾರ ನಿಗಮದ ಮೂಲಕ ಮನೆಗೆಲಸ, ದಿನಗೂಲಿ ಕೆಲಸ, ತರಕಾರಿ ಇನ್ನಿತರೆ ಬಡಕುಟುಂಬಗಳಿಗೆ ತಲಾ 5 ಸಾವಿರ ಆರ್ಥಿಕ ನೆರವನ್ನು ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರಕಾಶ್, ಪ್ರಧಾನಕಾರ್ಯದರ್ಶಿ ಎಲ್.ಮಲ್ಲಶೆಟ್ಟಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)