ಮೈಸೂರು

ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಸರಿಸಮನಾಗಿ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಕೆಆರ್ ‌ಎಸ್‌ ಅಣೆಕಟ್ಟೆ ಬಳಿ ಸ್ಥಾಪನೆ ಮಾಡುವುದಕ್ಕೆ ಸಂಘಟನೆಗಳ ವಿರೋಧ

ಮೈಸೂರು,ಜು.2:-  ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಸರಿಸಮನಾಗಿ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಯನ್ನು ಕೆಆರ್ ‌ಎಸ್‌ ಅಣೆಕಟ್ಟೆ ಬಳಿ ಸ್ಥಾಪನೆ ಮಾಡುವುದಕ್ಕೆ ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್‌ ಸೇರಿದಂತೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ನಗರದ ಜಲದರ್ಶಿನಿಯಲ್ಲಿ ನಿನ್ನೆ  ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಪ್ರೊ. ನಂಜರಾಜ ಅರಸ್‌ ಮೈಸೂರಿಗೆ ಪ್ರವಾಸ ಕೈಗೊಂಡಿದ್ದ ನೀರಾವರಿ ಸಚಿವರು ಕೃಷ್ಣರಾಜ ಜಲಾಶಯ ಅಣೆಕಟ್ಟಿನಲ್ಲಿ 8.30 ಕೋಟಿ ರೂ. ವೆಚ್ಚದಲ್ಲಿ ನಾಲ್ವಡಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಲು ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದ್ದು, ನಾವು ವಿಶ್ವೇಶ್ವರಯ್ಯ ಅವರ ವಿರೋಧಿಗಳೇನೂ ಅಲ್ಲ. ಆದರೆ  ನಾಲ್ವಡಿ ಅವರ ಸರಿಸಮನಾಗಿ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.

ನಾಲ್ವಡಿ ಅವರು ಜನರಿಗೆ ಕೊಟ್ಟಿರುವ ಕೊಡುಗೆ ಅಪಾರ. ಅಂದಿನ ಕಾಲದಲ್ಲಿ ಮೈಸೂರು ಸಂಸ್ಥಾನದ ಬಜೆಟ್ 2 ಕೋಟಿ 50ರಿಂದ 60 ಲಕ್ಷ ರೂಪಾಯಿ. ಆದರೆ ಅಣೆಕಟ್ಟು ನಿರ್ಮಾಣ ಮಾಡಲು ಆಗುವ ವೆಚ್ಚ ಸುಮಾರು ಎರಡು ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿತ್ತು. ಈ ಹಣವನ್ನು ಹೇಗೆ ಭರಿಸುವುದು ಎಂಬ ಚಿಂತೆ ಎದುರಾದಾಗ ನಾಲ್ವಡಿ ಅವರ ತಾಯಿ ರಾಜಮಾತೆ ವಾಣಿವಿಲಾಸ ಸನ್ನಿಧಾನ ಅವರು ತಿಜೋರಿಯಲ್ಲಿದ್ದ ಒಡವೆಗಳನ್ನು ನಾಲ್ವಡಿ ಅವರಿಗೆ ಕೊಟ್ಟು, ಅದನ್ನು ಮಾರಿ ಬಂದ ಹಣದಲ್ಲಿ ಕೆಆರ್ ‌ಎಸ್‌ ಅಣೆಕಟ್ಟು ನಿರ್ಮಾಣ ಕಾರ್ಯ ಆರಂಭಿಸಿದರು. ಅಂದು ಕೆಲವು ವರ್ಷಗಳ ಕಾಲ ಮಾತ್ರ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯ ಅವರು ಸೇವೆ ಸಲ್ಲಿಸಿದ್ದರು. ಮೈಸೂರು ಸಂಸ್ಥಾನದಲ್ಲಿ ದಿವಾನ್ ‌ರಾಗಿದ್ದರು. ಆದ ಮಾತ್ರಕ್ಕೆ ನಾಲ್ವಡಿ ಅವರ ಸಮನಾಗಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿಲ್ಲಿಸುವುದಕ್ಕೆ ನಾವು ಒಪ್ಪುವುದಿಲ್ಲ ಎಂದು ವಿರೋಧಿಸಿದ್ದಾರೆ.

ಮಂಡ್ಯ ಭಾಗದಲ್ಲಿ ಹೋರಾಗಾರರು ಕೂಡ ನಮಗೆ ಬೆಂಬಲ ನೀಡುತ್ತಿದ್ದು, ಅಲ್ಲಿ ಹೋಗಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಮೈಸೂರು ಹಾಗೂ ಮಂಡ್ಯದಲ್ಲಿ ಇದನ್ನು ಖಂಡಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಪ್ರೊ.ಶಬೀರ್ ಮುಸ್ತಾಫ, ಬೋವಿ ಸಮುದಾಯದ ಅಧ್ಯಕ್ಷ ಸೀತಾರಾಮ್, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ, ಸೋಸಲೆ ಸಿದ್ದರಾಜು, ದೀಶ್ ಅರಸ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಯಮುನಾ, ವಿಜಯದೇವರಾಜ ಅರಸ್, ಚಾಮುಂಡಪ್ಪ, ಎಂ.ಪೃತ್ವಿರಾಜ್, ಎಂ‌.ಎಸ್.ಅಶ್ವತ್ಥ ನಾರಾಯಣ, ಜಿ.ನಾಗರಾಜು, ಕೆ.ವಿ.ದೇವೆಂದ್ರ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: