
ಮೈಸೂರು
ಲಾಕ್ ಡೌನ್ ಸಂದರ್ಭದಲ್ಲಿ ಮನೆಯ ಗೋಡೆಯ ಮೇಲೆ ರಂಗು ರಂಗಿನ ಚಿತ್ತಾರ ಬಿಡಿಸಿದ ಶಿಕ್ಷಕಿ !
ಮೈಸೂರು,ಜೂ.2:- ಗೋಡೆ ಮೇಲೆ ಬಣ್ಣ ಬಣ್ಣದ ಚಿತ್ತಾರ, ಚಿಕ್ಕವರಿದ್ದಾಗ ಗೋಡೆಯನ್ನೇ ಬೋರ್ಡ್ ಮಾಡಿಕೊಂಡು ಮನಸ್ಸಿಗೆ ಬಂದದ್ದು ಬರೆದದ್ದು ಎಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಅದೇ ತರ ಈ ಲಾಕ್ ಡೌನ್ ಸಂದರ್ಭದಲ್ಲಿ ಶಿಕ್ಷಕಿಯೋರ್ವರು ತಮ್ಮ ಮನೆಯ ಗೋಡೆಯ ಮೇಲೆ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದ್ದಾರೆ, ಹೆಸರು ನಂದಿನಿ ಎಸ್. ಮೈಸೂರಿನ ಜನತಾ ನಗರ ನಿವಾಸಿ. ಪೂರ್ಣಪ್ರಜ್ಞಾ ಶಾಲೆಯಲ್ಲಿ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಹೊರಬರಲಾಗದ ಸ್ಥಿತಿಯಲ್ಲಿ ಮನೆ ಒಳಗೋಡೆ ಹಾಗೂ ಹೊರ ಗೋಡೆಯ ಮೇಲೆ ಸುಂದರ ಪ್ರಕೃತಿಯನ್ನು ಚಿತ್ರಿಸಿದ್ದಾರೆ. ಅದಲ್ಲದೇ ಮನೆಗೆ ಬರುವವರನ್ನು ಸ್ವಾಗತಿಸಲು ಮನೆಯ ಮುಂಭಾಗವೇ ಒಂಟಿ ಸಲಗ ನಿಂತಿರುವಂತೆ ಆಕರ್ಷಕವಾಗಿ ಚಿತ್ರ ಬಿಡಿಸಿದ್ದಾರೆ.
ತಮ್ಮ ಅನಿಸಿಕೆಹಂಚಿಕೊಂಡಿರುವ ಅವರು ಪ್ರತಿನಿತ್ಯ ಶಾಲೆಯಲ್ಲಿ ನಾನು ಮಕ್ಕಳ ಜೊತೆ ಒಡನಾಟದಲ್ಲಿ ಇದ್ದೆ. ಆದರೆ ದೇಶದಾದ್ಯಂತ ಕೊರೋನಾ ಎಂಬ ಭೀಕರ ವೈರಸ್ ಇರುವ ಕಾರಣ ನಾನು ಮನೆಯಲ್ಲೇ ಇದುದ್ದರಿಂದ ಸಮಯವನ್ನು ವ್ಯಯ ಮಾಡದೆ ಗೋಡೆ ಮೇಲೆ ಚಿತ್ರವನ್ನು ಬಿಡಿಸಿರುತ್ತೇನೆ.ಈ ಚಿತ್ರದ ಮೂಲಕ ನಮ್ಮ ಮನೆಯು ಅಂದವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಿದೆ. ಇದರಿಂದ ನನ್ನ ಮಗ ನಿಶಾನ್, ಪತಿ ನಾಗೇಶ್, ನಮ್ಮ ಅತ್ತೆ ನಾಗಮ್ಮ, ಮಾವ ಕಾಳಯ್ಯ ಸೇರಿದಂತೆ ನಮ್ಮ ಕುಟುಂಬಸ್ಥರಿಗೆ ಹಾಗೂ ನನಗೆ ಸಂತೋಷ ತಂದುಕೊಟ್ಟಿದೆ ಎಂದರು.
ಈ ಹಿಂದೆ ಊರಿನ ಜಾತ್ರೆಯ ಸಂದರ್ಭದಲ್ಲಿ ಮನೆಯ ಗೋಡೆಗಳಿಗೆ ,ದೇವಸ್ಥಾನದ ಹೊರ ಪ್ರಾಕಾರಗಳ ಗೋಡೆಯ ಮೇಲೆ ಕೆಂಪು ಮಣ್ಣಿನಿಂದ ಜಾನಪದ ಚಿತ್ರಗಳು,ಕುದುರೆ,ರಥ,ಎತ್ತಿನ ಬಂಡಿ,ಆಕಳು,ಆನೆ ಮುಂತಾದ ಪ್ರಾಣಿಗಳ ಚಿತ್ರ ಬಿಡಿಸುತ್ತಿದ್ದರು. ಕಾಲಕ್ರಮೇಣ ಈ ಕಲೆ ಕಾಣದಾಗಿ ಇಂದು ನಶಿಸುವ ಅಂಚಿನಲ್ಲಿದೆ. ಹೀಗೆ ಅಳಿವಿನಂಚಿನಲ್ಲಿರುವ ಕಲೆಗಳಿಗೆ ಮಲ್ಲಿಗೆ ನಗರಿಯ ಶಿಕ್ಷಕಿಯೋರ್ವಳು ಜೀವ ತುಂಬಲು ಮುಂದಾಗಿದ್ದಾರೆ. (ಕೆ.ಎಸ್,ಎಸ್.ಎಚ್)