ಮೈಸೂರು

ಕೊರೋನಾ ಬೆದರಿಸುತ್ತಿಲ್ಲ  ಜೀವನ ಪಾಠ ಕಲಿಸುತ್ತಿದೆ : ಶ್ರೀ ಗಣಪತಿ ಸಚ್ಚಿದಾನಂದಸ್ವಾಮೀಜಿ ಹಿತವಚನ

ಮೈಸೂರು,ಜೂನ್.2:- ಪ್ರಕೃತಿ ಮೇಲೆ ಮಾಡಿದ ತಪ್ಪುಗಳಿಗಾಗಿ ಕೊರೋನಾ ಜೀವಾಣು ಈಗ ಮಾನವರಿಗೆ ಜೀವನದ ಪಾಠ ಕಲಿಸುತ್ತಿದೆ ಹೊರತು ಬೆದರಿಸುತ್ತಿಲ್ಲ. ಆದ್ದರಿಂದ ನಮ್ಮ ಮೇಲೆ ಕೊರೊನಾ ರೋಗಾಣು ಎರಗುತ್ತಿರುವುದು ಶಿಕ್ಷೆ ಅಂದು ಕೊಳ್ಳದೆ ಶಿಕ್ಷಣ ಎಂದು ಭಾವಿಸಿ ಭವಿಷ್ಯದ ಬದುಕನ್ನು ಸಾತ್ವಿಕ ತಳಹದಿಯಲ್ಲಿ ರೂಪಿಸಿಕೊಳ್ಳಬೇಕೆಂದು ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ   ಗಣಪತಿ ಸಚ್ಚಿದಾನಂದಸ್ವಾಮೀಜಿ ಹಿತವಚನ ನೀಡಿದ್ದಾರೆ.

ಅವರು ಇಂದು ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ತಮ್ಮಹಿಂದೂ ಪಂಚಾಂಗದ ಪ್ರಕಾರದ 78ನೇ ವರ್ಧಂತಿ ಆಚರಣೆಯಲ್ಲಿ ಜಗತ್ತಿನಲ್ಲಿರುವ ತಮ್ಮ ಭಕ್ತಕೋಟಿಗೆ ಟೆಲಿ ಮಾಧ್ಯಮದ ಮೂಲಕ ನೀಡಿದ ಸಂದೇಶದಲ್ಲಿ, ಕೊರೊನಾ ಜೀವಾಣುವಿಗೆ ಮಾನವರು ಹೆದರದೆ, ಅದು ಕಲಿಸುವ ಸ್ವಚ್ಛತೆಯ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ದೇಹ ಮತ್ತು ಮನಸನ್ನಲ್ಲದೆ, ವಿಶ್ವ ಪರಿಸರವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಎಷ್ಟು ಹೇಳಿದರೂ ಕೇಳದೆ ಮಾನವರು ಉದಾಸೀನರಾಗಿದ್ದರು. ಅಭಿವೃದ್ದಿ ಹೆಸರಿನಲ್ಲಿ ತಮ್ಮ ಐಷಾರಾಮಿ ಜೀವನಕ್ಕಾಗಿ ನೆಲ,ಜಲ,ವಾಯುವನ್ನು ಮಾಲಿನ್ಯ ಮಾಡಿದ್ದರು. ಇದರ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಕೇಳಲಿಲ್ಲ. ಇದರಿಂದ ಕೊರೊನಾ ಎಂಬ ಕಣ್ಣಿಗೆ ಕಾಣದ ಕ್ರಿಮಿ ನಮಗೀಗ ಸ್ವಚ್ಛ ಪರಿಸರದ ಪಾಠ ಕಲಿಸುತ್ತಿದೆ. ಈಗಲಾದರೂ, ಮಾನವರುಎಚ್ಚೆತ್ತುಕೊಂಡು ಪ್ರಕೃತಿಯಲ್ಲಿರುವ ಪ್ರಾಣಿ ಸಂಕುಲ ಉಳಿಸಲು,ನಿಸರ್ಗ ಮಾತೆಯ ಸಸ್ಯ ಸಂತತಿ ಉಳಿದು ಬೆಳೆಯಲು ಸಹಕರಿಸಬೇಕು. ನಾವು ಮಾಡಿದ ತಪ್ಪನ್ನು ನಾವು ಸರಿಪಡಿಸಿಕೊಂಡರೆ, ನಮ್ಮ ಮೇಲೆ ದಾಳಿ ಮಾಡುತ್ತಿರುವ ಕೊರೋನಾ ತನ್ನಿಂದ ತಾನೇ ದೂರವಾಗಿ ಬಿಡುತ್ತದೆ ಎಂದು ಅಭಿಪ್ರಾಯಪಟ್ಟರು.

ಕೊರೋನಾ ಕೇವಲ ಸ್ವಚ್ಛತೆಯ ಪಾಠವನ್ನಷ್ಟೆ ಮಾನವರಿಗೆ ಕಲಿಸುತ್ತಿಲ್ಲ. ನೈತಿಕ ಪಾಠವನ್ನೂ ಕಲಿಸುತ್ತಿದೆ. ಹಣದಾಹದಿಂದ ಮಾಡಬಾರದ ತಪ್ಪುಗಳನ್ನೆಲ್ಲ ಮಾನವರು ಮಾಡುತ್ತಿದ್ದರು. ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡುವ ಮಾನವನಿಗೆ,ಮನುಷ್ಯತ್ವದ ಪಾಠ ಹೇಳುತ್ತಿದೆ. ಪರರ ಹಿತಕ್ಕಾಗಿ ದುಡಿವ ಬುದ್ದಿಯನ್ನೂಸಹ ಕಲಿಸುತ್ತಿದೆ.ಆದ್ದರಿಂದ ಇಂಥ ಸಂದಿಗ್ದ ಸಮಯದಲ್ಲಿ ಕೂಡಿಟ್ಟ-ಬಚ್ಚಿಟ್ಟ ಹಣವನ್ನು ಮಾನವ ಕಲ್ಯಾಣಕ್ಕೆ ಬಳಸಿಕೊಳ್ಳಲು ಮೀಸಲಿಡಬೇಕು. ಕೊರೋನಾ ದಾಳಿ ಸಂದರ್ಭದಲ್ಲೂ ಹಣ ಮಾಡಬೇಕೆನ್ನುವ ದುರಾಸೆ ಬುದ್ದಿ ಬಿಡಬೇಕು. ಜೀವ ಇದ್ದರೆ ಜೀವನ ಎಂಬುದನ್ನು ಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರು ಮಾನವರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು   ಶ್ರೀಗಳು ಕರೆ ನೀಡಿದರು.

ಮನುಷ್ಯನ ದುರಭ್ಯಾಸಗಳು ಕೊರೋನಾ ಕಾರಣದಿಂದ ದೂರಾಗುತ್ತಿವೆ. ನಾವು ಎಷ್ಟೇ ವಿದ್ಯಾವಂತರಾದರು ಮೂಗು,ಬಾಯಿ,ಕಣ್ಣನ್ನು ಕೊಳಕು ಕೈಯಿಂದ ಮುಟ್ಟುತ್ತಿದ್ದೆವು. ಈಗ ಕೈ ಯಾವುದೇ ಕಾರಣಕ್ಕೂ ಮೂಗು,ಬಾಯಿ,ಕಣ್ಣನ್ನು ಮುಟ್ಟದಂತೆ ಎಚ್ಚರದಿಂದಿರುವಂತೆ ಕೊರೋನಾ ಪಾಠ ಹೇಳುತ್ತಿದೆ. ಸಣ್ಣ ಮಕ್ಕಳು ಬಾಯಿಗೆ ಬೆರಳಿಟ್ಟುಕೊಳ್ಳುವುದನ್ನು ತಪ್ಪಿಸಲು ಹೆತ್ತವರು ಕಠಿಣವಾಗಿ ವರ್ತಿಸುವಂತೆ ಕೊರೋನಾ ಸಹ ಸ್ವಚ್ಛವಾಗಿರುವಂತೆ ಮಾಡಲು ತುಸು ಹೆಚ್ಚೇ ಕಠಿಣವಾಗಿ ವರ್ತಿಸುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬಾರದು, ನಮ್ಮ ಪರಿಸರದಲ್ಲಿ ಎಲ್ಲೆಂದರಲ್ಲಿ ಕಸ ಹಾಕದೆ ಸ್ವಚ್ಛ ವಾಗಿಟ್ಟುಕೊಳ್ಳಬೇಕೆಂಬುದನ್ನೂ ಕಲಿಸುತ್ತಿದೆ. ಕೊಳಕಾಗಿರುತ್ತಿದ್ದ ನಮ್ಮ ಬಸ್,ರೈಲು ಈಗ ನಿತ್ಯ ಶುಚಿಯಾಗುತ್ತಿವೆ. ಬಹುಮುಖ್ಯವಾಗಿ ಸಾರ್ವಜನಿಕರು ಸಂಚರಿಸುವ ವಾಹನಗಳು,ಪ್ರದೇಶಗಳು ನೂಕುನುಗ್ಗಲು ಇಲ್ಲದಂತೆ ನಿರಾಳವಾಗಿವೆ. ಇದೆಲ್ಲಾ ನಮಗೆ ಕೊರೋನಾ ನಮಗೆ ಕಲಿಸುತ್ತಿರುವ ಜೀವನದ ಪಾಠವಲ್ಲದೆ ಬೇರೇನಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಬೇರೆಯವರಿಗೆ ಹೇಗೋ ಏನೋ ಗೊತ್ತಿಲ್ಲ. ಕೊರೋನಾದಿಂದಾಗಿ ನನ್ನ ಬಹುಕಾಲದ ಮೂರು ಆಸೆಗಳಲ್ಲಿ ಎರಡು ಆಸೆಗಳು ಫಲಿಸಿವೆ. ಮೊದಲನೆಯದು ಬಹಳ ಸರಳ ರೀತಿಯಲ್ಲಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳಬೇಕೆಂಬ ಆಸೆ ಇತ್ತು. ಅದೀಗ ಕೊರೋನಾ ಕಾರಣದಿಂದ ಈಡೇರಿದೆ. ನನಗೆ ನೆನಪಿರುವಂತೆ ಒಂಭತ್ತನೇ ವಯಸ್ಸಿನಿಂದ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಆಗಲೂ ನನ್ನ ತಾತಾ ನೂರಾರು ಬಡಜನರಿಗೆ ಅನ್ನದಾನ ಮಾಡುತ್ತಿದ್ದರು. ಅದರಂತೆ ಈಗ ಜಗತ್ತಿನಾದ್ಯಂತ ತಮ್ಮ ಭಕ್ತರು ಬಡವರಿಗೆ ಅನ್ನದಾನ ಮಾಡಿ ನನ್ನ ಆಸೆ ಈಡೇರಿಸುತ್ತಿದ್ದಾರೆ.

ಎರಡನೆಯದು ಸತತ ಮೂರು ತಿಂಗಳೂ ಮೈಸೂರಿನ ಆಶ್ರಮ ಬಿಟ್ಟುಎಲ್ಲೂ ಹೋಗ ಬಾರದೆಂಬ ಆಸೆ ಇತ್ತು. 1966ರಿಂದ ವಿಶ್ವ ಪರ್ಯಟನೆ ಮಾಡುತ್ತಿದ್ದರಿಂದ ಮೈಸೂರಿನ ಆಶ್ರಮದಲ್ಲಿ ಸತತ ಮೂರು ತಿಂಗಳು ನೆಲೆಸಲಾಗಿರಲಿಲ್ಲ. ಅದೂ ಸಹ ಈಗ ಪೂರೈಸಿದೆ. ನನ್ನ ಮೂರನೇ ಆಸೆ ಒಂದು ವರ್ಷ ಕಾಲ ಅಧ್ಯಾತ್ಮದ ತಪೋಭೂಮಿ ಹಿಮಾಲಯದಲ್ಲಿ ನೆಲೆಸಬೇಕೆಂಬುದು. ಭಗವಂತನ ಸಂಕಲ್ಪವಿದ್ದರೆ ಶೀಘ್ರವೇ ಈಡೇರುತ್ತೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: