ಪ್ರಮುಖ ಸುದ್ದಿ

ಕೊಡಗಿನ ಬೆಳೆಗಾರರಿಗೆ ಪ್ಯಾಕೇಜ್ ನಿಂದ ಲಾಭವಾಗಿಲ್ಲ : ಪ್ರಾಂತ ರೈತ ಸಂಘ ಟೀಕೆ

ರಾಜ್ಯ( ಮಡಿಕೇರಿ) ಜೂ.2 :- ಕೊರೊನಾ ಸಾಂಕ್ರಾಮಿಕ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ 20 ಸಾವಿರ ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನಿಂದ ಕೊಡಗಿನ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗಿಲ್ಲವೆಂದು ಆರೋಪಿಸಿರುವ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕ, ಜಿಲ್ಲೆಯ ಬೆಳೆಗಾರರ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಇ.ರ. ದುರ್ಗಾಪ್ರಸಾದ್ ಮಾತನಾಡಿ, ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನವೇ ದೇಶದ ಅರ್ಥ ವ್ಯವಸ್ಥೆ ಕುಸಿದಿತ್ತು. ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಕೈಗಾರಿಕೆಗಳ ಸ್ಥಗಿತ ಮುಂತಾದವುಗಳು ಇದಕ್ಕೆ ಕಾರಣವಾಗಿದ್ದರೆ, ಆ ನಂತರದಲ್ಲಿ ಕೇಂದ್ರ ಸರ್ಕಾರದ ಆರಂಭಿಕ ಅಸಡ್ಡೆಯಿಂದ ದೇಶ ಕೊರೊನಾ ಸಾಂಕ್ರಾಮಿಕದ ಸುಳಿಗೆ ಸಿಲುಕಿ ದೇಶದ ಅರ್ಥ ವ್ಯವಸ್ಥೆ ಮತ್ತಷ್ಟು ಬಿಗಡಾಯಿಸುವಂತಾಯಿತೆಂದು ಆರೋಪಿಸಿದರು.
ದೇಶದ ಅರ್ಥ ವ್ಯವಸ್ಥೆ ಕುಸಿದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು, ರೈತರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು, ಈ ಜನರನ್ನು ರಕ್ಷಿಸುವ ಹೆಸರಿನಲ್ಲಿ ಪ್ರಧಾನ ಮಂತ್ರಿಗಳು 20 ಸಾವಿರ ಲಕ್ಷ ಕೋಟಿಗಳ ಪ್ಯಾಕೇಜ್ ಘೋಷಿಸಿದ್ದಾರೆ. ಕೇಂದ್ರದ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಮೊತ್ತವನ್ನು ಕೈಗಾರಿಕೆಗಳು, ಕಾರ್ಮಿಕರು ಮತ್ತು ಕೃಷಿ ಕ್ಷೇತ್ರಕ್ಕೆಂದು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಆದರೆ, ಅವರ ಈ ಘೋಷಣೆಯಿಂದ ಕೊಡಗಿನ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ಯಾಕೇಜಿನಲ್ಲಿ ಕಾಫಿ, ಭತ್ತ, ಕರಿಮೆಣಸು ಬೆಳೆಗಾರರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸಿದ ಬಜೆಟ್‍ನಲ್ಲು ಕೊಡಗಿನ ಬೆಳೆಗಾರರನ್ನು ನಿರ್ಲಕ್ಷಿಸಲಾಗಿದೆಯೆಂದು ದೂರಿದರು.
ಬಜೆಟ್‍ಗೆ ಮುನ್ನ ಬೆಳೆಗಾರ ಸಂಘಟನೆಗಳು, ರೈ ಸಂಘಟನೆಗಳ ಪ್ರಮುಖರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ, ಕೊಡಗಿನ ಬೆಳೆಗಾರರ ಮತ್ತು ರೈತರ ಹಲವು ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಪ್ಯಾಕೇಜ್‍ಗಳನ್ನು ಬಜೆಟ್‍ನಲ್ಲಿ ಸೇರಿಸುವಂತೆ ಮನವಿ ಮಾಡಿಕೊಂಡಿದ್ದವು. ಇದರೊಂದಿಗೆ ಜಿಲ್ಲೆಯ ಶಾಸಕರುಗಳು ಕೂಡ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಬೆಳೆಗಾರರ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದರು. ಈ ಹಂತದಲ್ಲಿ ಸೂಕ್ತ ಸ್ಪಂದನ ನೀಡುವ ಭರವಸೆ ದೊರಕಿತ್ತಾದರು, ಅದು ಕಾರ್ಯರೂಪಕ್ಕೆ ಬರಲಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಕೊಡಗಿನ ಕರಿಮೆಣಸಿನ ಧಾರಣೆ ಕುಸಿತಕ್ಕೆ ಕಾರಣವಾಗಿರುವ ಕರಿಮೆಣಸು ಆಮದನ್ನು ತಡೆಗಟ್ಟುವಲ್ಲಿ, ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡುವಲ್ಲಿ ರೈತರ 10 ಹೆಚ್.ಪಿ. ವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತವಾಗಿ ವಿದ್ಯುತ್ ನೀಡುವಲ್ಲಿ, ಕೊಡಗಿನಲ್ಲಿ ವನ್ಯ ಪಾಣಿಗಳ ಹಾªಳಿಯನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಡಾ. ದುರ್ಗಾಪ್ರಸಾದ್ ಆರೋಪಿಸಿದರು.
ಸರ್ಕಾರಗಳು ತಪ್ಪು ತಿಳುವಳಿಕೆಯಿಂದಾಗಿ ರೈತರಿಗೆ ನೇರವಾಗಿ ಅನುಕೂಲತೆಯನ್ನು ಒದಗಿಸುವುದಕ್ಕೆ ಬದಲಾಗಿ ಕೃಷಿ ಉತ್ಪನ್ನಗಳನ್ನು ಅವಲಂಬಿಸಿದ ಕೈಗಾರಿಕೋದ್ಯಮಿಗಳಿಗೆ ಮತ್ತು ರಫ್ತುದಾರರಿಗೆ ನೆರವನ್ನು ನೀಡುತ್ತಾ ಬರುತ್ತಿವೆ. ಆದರೆ, ಈ ನೆರವು ರೈತರ ಹಿತ ಕಾಯುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದು ತಿಳಿಸಿ, ಇದರ ಬದಲಾಗಿ ಸರ್ಕಾರಗಳು ಗ್ರಾಮೀಣ ಪ್ರದೇಶದ ಜನತೆಯ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದಿನ ಆರ್ಥಿಕ ಬಿಕ್ಕಟ್ಟನ್ನು ಕಡಿಮೆಮಾಡಲು ಸಾಧ್ಯವಿದ್ದ ಬೇಡಿಕೆಗಳನ್ನು ಅಂಗೀಕರಿಸದೆ ಪೆಟ್ರೋಲ್ ದರವನ್ನು ಹೆಚ್ಚಿಸುವ ಮೂಲಕ ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣ ಗೊಳ್ಳುವಂತೆ ಮಾಡಿದೆ ಎಂದು ದೂರಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವಾಗಿ ನಮ್ಮ ಸಹಾಯಕ್ಕೆ ಬರುತ್ತವೆ ಎಂಬ ಭ್ರಮೆಯಿಮದ ಬೆಳೆಗಾರರು ಮತ್ತು ರೈತರು ಹೊರ ಬಂದು ಜಾತಿ ಮತ ಭೇದವಿಲ್ಲದೆ, ರಾಜಕೀಯ ನಿಲುವುಗಳನ್ನು ಬದಿಗೊತ್ತಿ, ನಿರಂತರ ಹೋರಾಟಗಳಿಗೆ ಮುನ್ನುಡಿ ಬರೆಯಬೇಕಾಗಿದೆಯೆಂದು ಡಾ.ದುರ್ಗಾಪ್ರಸಾದ್ ಅಭಿಪ್ರಾಯಪಟ್ಟರು.
ಸಂಘಟನೆಯ ಸದಸ್ಯರಾದ ಕೆ.ಎ.ಹಂಸ ಮಾತನಾಡಿ, ಯಾಂತ್ರೀಕೃತ ಭತ್ತ ನಾಟಿಗೆ ಕೃಷಿ ಇಲಾಖೆ 7 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ನೀಡುತ್ತಿದ್ದು, ಇದನ್ನು ಕೈ ಮೂಲಕ ನಾಟಿಮಾಡುವ ಕೃಷಿಕರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಮತ್ತೋರ್ವ ಸದಸ್ಯ ಸಿ.ಎ.ಹಮೀದ್ ಮಾತನಾಡಿ, ಮಳೆಹಾನಿಯಿಂದ ಬೆಳೆನಷ್ಟಕ್ಕೆ ಒಳಗಾದ ರೈತರ ಅಧಿಕೃತವಾದ ನಷ್ಟವನ್ನು ಗ್ರಾಮ ಲೆಕ್ಕಿಗರು ಅಂದಾಜು ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದರು ಸರ್ಕಾರ ಮಾತ್ರ ಕೇವಲ 500 ರಿಂದ 1000 ರೂ. ಪರಿಹಾರ ನೀಡಿ ಕೈತೊಳೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: