ಪ್ರಮುಖ ಸುದ್ದಿ

ಹೆಚ್‍ಡಿಕೆ ಹಾಗೂ ಖಾದರ್ ಅವರನ್ನು ಆಹ್ವಾನಿಸಲು ಒತ್ತಾಯ

ರಾಜ್ಯ( ಮಡಿಕೇರಿ) ಜೂ.2 :- 2018ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ವಸತಿ ಸಚಿವ ಯು.ಟಿ.ಖಾದರ್ ಅವರನ್ನು ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಾಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಳೆಹಾನಿ ಸಂತ್ರಸ್ತರು ಅತಂತ್ರ ಸ್ಥಿತಿಯಲ್ಲಿದ್ದಾಗ ತಕ್ಷಣ ಸ್ಪಂದಿಸಿದ ಮಾಜಿ ಸಿ.ಎಂ. ಕುಮಾರಸ್ವಾಮಿ ಹಾಗೂ ಯು.ಟಿ.ಖಾದರ್ ಅವರು ಸುಮಾರು 800 ಮನೆಗಳ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಇದೀಗ ಜೂನ್ 4 ರಂದು ನಡೆಯುವ ನೂತನ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇವರುಗಳಿಗೂ ಆಹ್ವಾನಿಸುವ ಅಗತ್ಯವಿದೆ ಎಂದು ತಿಳಿಸಿದರು.
2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮನೆ ಕಳೆದುಕೊಂಡವರಿಗೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ, ತಲಾ 10 ಸಾವಿರ ರೂ. ಗಳಂತೆ ಮನೆ ಬಾಡಿಗೆ ವಿತರಣೆ ಮತ್ತು ತಕ್ಷಣದ ಪರಿಹಾರವಾಗಿ ತಲಾ 3,800 ರೂ. ಗಳನ್ನು ನೀಡಿರುವ ಹೆಗ್ಗಳಿಕೆ ಅಂದಿನ ಸಮ್ಮಿಶ್ರ ಸರ್ಕಾರದ್ದಾಗಿದೆ. ಆದ್ದರಿಂದ ಆಶ್ರಯ ದೊರೆಯಲು ಕಾರಣರಾದವರನ್ನು ಗೌರವಿಸುವ ಅಗತ್ಯವಿದೆ ಎಂದರು.
5 ಸಾವಿರ ಖಾತೆಗೆ ಹಾಕಿ
ಸೇವಾಸಿಂಧು ಯೋಜನೆಯ ಮೂಲಕ ಐದು ಸಾವಿರ ರೂ. ಪ್ರೋತ್ಸಾಹ ಧನ ಪಡೆಯಲು ಚಾಲಕರು ಅರ್ಜಿ ಸಲ್ಲಿಸಿ ಹಲವು ದಿನಗಳೇ ಕಳೆದಿದ್ದರೂ ಹಣ ಬಿಡುಗಡೆಯಾಗಿಲ್ಲ. ತಕ್ಷಣ ಸರ್ಕಾರ ಚಾಲಕರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಖಾತೆಗೆ ಹಣ ಜಮಾ ಮಾಡಬೇಕು ಮತ್ತು ಚಾಲಕರಿಗೆ ಸರ್ಕಾರದ ವತಿಯಿಂದಲೂ ದಿನಸಿ ಕಿಟ್ ಗಳನ್ನು ವಿತರಿಸಬೇಕೆಂದು ಉಸ್ಮಾನ್ ಒತ್ತಾಯಿಸಿದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಲಾಕ್‍ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವ ದೇವಾಲಯದ ಅರ್ಚಕರಿಗೆ ಅಗತ್ಯ ವಸ್ತುಗಳ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ಸಂಕಷ್ಟದಲ್ಲಿರುವ ಮಸೀದಿಗಳ ಮೌಲಿಗಳಿಗೂ ಜಿಲ್ಲಾಡಳಿತದ ವತಿಯಿಂದ   ಅಗತ್ಯ ದಿನಸಿ ವಸ್ತುಗಳ ಕಿಟ್ ವಿತರಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಅಸಂಘಟಿತ ಕಾರ್ಮಿಕರ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಇ.ಅಶ್ರಫ್, ಮಡಿಕೇರಿ ಬ್ಲಾಕ್ ಅಲ್ಪಾಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಕಲೀಲ್ ಭಾಷ, ಕಾರ್ಯದರ್ಶಿ ಎಂ.ಎ.ಮುನೀರ್ ಮಾಚರ್ ಹಾಗೂ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಳಿರ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: