ಪ್ರಮುಖ ಸುದ್ದಿಮೈಸೂರು

ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಮತ್ತೆ ‘ಕಾವೇರಿ’ದ ಪ್ರತಿಭಟನೆ

page-6-anchor-2-webಮೈಸೂರು: ಮತ್ತೆ 12 ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಂಪುಟದರ್ಜೆ ಸಭೆಯನ್ನು ಕರೆದಿದ್ದು, ಆದೇಶದ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ‍ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ನಿರ್ಣಯ ಕೈಗೊಂಡರೂ ಬೆಂಬಲಿಸುತ್ತೇವೆ. ನೀರು ಬಿಡುವುದು ಬೇಡ ಎಂದು ಪ್ರಮುಖ ರಾಜಕೀಯ ಪಕ್ಷಗಳು ತಿಳಿಸಿವೆ.

ನೀರು ಹರಿಸಿ ಎಂಬ ಆದೇಶ ಬರುತ್ತಿದ್ದಂತೆ ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ ಮತ್ತೆ ಪ್ರತಿಭಟನೆಗಳು ಮುಂದುವರಿದಿವೆ. ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು ಮೈಸೂರು-ಬೆಂಗಳೂರು ಮುಖ್ಯರಸ್ತೆಯನ್ನು ಬಂದ್ ಮಾಡಿದ್ದಾರೆ. ಮಂಡ್ಯದ ಸಂಜಯ್ ಸರ್ಕಲ್ ಬಳಿ ಸೇರಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಸರ್.ಎಮ್. ವಿಶ್ವೇಶ್ವರಯ್ಯ ವಿಗ್ರಹದ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಇಂತಹದ್ದೇ ಪ್ರತಿಭಟನೆಗಳು ಮೈಸೂರು-ನಂಜನಗೂಡು ರಸ್ತೆಯಲ್ಲೂ ನಡೆದಿವೆ. ಮಂಡ್ಯದಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದ್ದು, 144 ಸೆಕ್ಷನ್ ಜಾರಿಯಾಗಿದೆ.

ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಮೈಸೂರಿನಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕೋರ್ಟ್, ಜಿಲ್ಲಾಧಿಕಾರಿ ಕಚೇರಿ, ಗನ್ ಹೌಸ್ ಸರ್ಕಲ್, ಮೈಸೂರು-ತಮಿಳುನಾಡು ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಸೇನೆ ಸದಸ್ಯರು ಮೈಸೂರು ಕೋರ್ಟ್ ಮುಂದೆ ಖಾಲಿ ಪಾತ್ರೆಗಳನ್ನು ಹಿಡಿದು ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದರು. ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 212ರಲ್ಲಿ ವಾಹನ ಜಾಥಾ ನಡೆಸಿದರು.

ಚಾಮರಾಜನಗರದಲ್ಲಿ ಸ್ವಘೋಷಿತ ಬಂದ್ ನಡೆಯಿತು. ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿ ಇತರ ಎಲ್ಲ ವಾಹನಗಳೂ ಗಡಿ ಬಳಿ ಸಂಚಾರ ಸ್ಥಗಿತಗೊಳಿಸಿ ಅಲ್ಲಿಂದ ನಡೆದುಕೊಂಡು ತಮಿಳುನಾಡಿಗೆ ತೆರಳಿದರು. ಗಡಿಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಎಸ್‍ಪಿ ಕುಲ್ದೀಪ್ ಕುಮಾರ್ ಆರ್. ಜೈನ್ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆಯಲ್ಲಿ ಮತ್ತೆ ಕರ್ನಾಟಕಕ್ಕೆ ಅನ್ಯಾಯವಾದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಮಂಡ್ಯ, ಮೈಸೂರು ಮತ್ತು ಚಾಮರಾಜನಗರದ ಜನರನ್ನು ನಿಯಂತ್ರಿಸಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Leave a Reply

comments

Related Articles

error: