ಕರ್ನಾಟಕಪ್ರಮುಖ ಸುದ್ದಿ

ನಿಸರ್ಗ ಚಂಡಮಾರುತಕ್ಕೆ ಸಿಲುಕಿದ್ದ ದೋಣಿಯಿಂದ ಏಳು ಮಂದಿ ಮೀನುಗಾರರ ರಕ್ಷಣೆ

ಕಾರವಾರ,ಜೂ.3- ನಿಸರ್ಗ ಚಂಡಮಾರುತಕ್ಕೆ ಸಿಲುಕಿ ಅಪಾಯದಲ್ಲಿದ್ದ ದೋಣಿಯಿಂದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಗೋವಾದ ವಾಸ್ಕೊ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆ ಮಲ್ಪೆಯ ವಡಭಾಂಡೇಶ್ವರದ ದೀಪಿಕಾ ಎಂಬವರಿಗೆ ಸೇರಿದ ‘ಶ್ರೀದುರ್ಗಾ ಹನುಮ’ ದೋಣಿ ನಿಸರ್ಗ ಚಂಡಮಾರುತಕ್ಕೆ ಸಿಲುಕಿ ಮುಳುಗುವ ಅಪಾಯದಲ್ಲಿದ್ದತ್ತು. ಈ ವೇಳೆ ಸಮೀಪದಲ್ಲಿದ್ದ ದೋಣಿಗಳ ಮೀನುಗಾರರು ಏಳು ಮಂದಿಯನ್ನು ರಕ್ಷಿಸಿದ್ದಾರೆ.

ಭಟ್ಕಳ ತಾಲ್ಲೂಕಿನ ಕೇಶವ ಮಾದೇವ ಮೊಗೇರ, ನಾಗರಾಜ್ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್ ಜಟ್ಟ ಮೊಗೇರ, ಗುರುರಾಜ್ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಾಂತ್ರ ಆ ದೋಣಿಯಲ್ಲಿದ್ದರು.

ಚಂಡಮಾರುತದ ರಭಸಕ್ಕೆ ದೋಣಿಯು ನೀರಿನಲ್ಲಿ ಓಲಾಡುತ್ತಿದ್ದ ಸಂದರ್ಭದಲ್ಲೇ ಅದರ ಮುಂಭಾಗದ ಫೈಬರ್ ರಚನೆಯು ಒಡೆಯಿತು. ಇದರಿಂದ ದೋಣಿಯೊಳಗೆ ನೀರು ನುಗ್ಗಲು ಶುರುವಾಯಿತು. ಪಕ್ಕದಲ್ಲೇ ಇದ್ದ ದೋಣಿಗಳ ಮೀನುಗಾರರಿಗೆ ಮಾಹಿತಿ ನೀಡಿದ್ದರಿಂದ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದರು ಎಂದು ಮೀನುಗಾರ ತಿಳಿಸಿದ್ದಾರೆ.

ಸುಮಾರು 8 ಲಕ್ಷ ರೂ. ಮೌಲ್ಯದ ಮೀನು, ಡೀಸೆಲ್ ಸಮುದ್ರದಲ್ಲೇ ಚೆಲ್ಲಿಹೋಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. (ಎಂ.ಎನ್)

 

 

 

Leave a Reply

comments

Related Articles

error: