ದೇಶಪ್ರಮುಖ ಸುದ್ದಿ

ನಿಸರ್ಗ ಚಂಡಮಾರುತ: ಮುಂಬೈನಲ್ಲಿ ಮುಳುಗಿದ ಗಣೇಶನ ದೇವಸ್ಥಾನ

ಮುಂಬೈ,ಜೂ.3-ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿದೆ. ಚಂಡಮಾರುತ ಮುಂದಿನ ಮೂರು ಗಂಟೆಗಳ ಕಾಲ ಕರಾವಳಿಯಾದ್ಯಂತ ತನ್ನ ಪ್ರಭಾವವನ್ನು ಬೀರಲಿದೆ. ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರ್ಮೋಡದ ವಾತಾವರಣ ಕೂಡ ಇದೆ.

ಈ ಮಧ್ಯೆ ಇಲ್ಲಿನ ಖಾರ್ ದಂಡಾ ಪ್ರದೇಶದಲ್ಲಿರುವ ಗಣೇಶನ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಖಾರ್ ದಂಡಾ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ದೇವಸ್ಥಾನ, ಇದೀಗ ಸಮುದ್ರ ನೀರಿನ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದೆ.

ಚಂಡಮಾರುತ ಅಪ್ಪಳಿಸಿರುವ ಕುರಿತು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮುಂದಿನ ಮೂರು ಗಂಟೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಿದೆ. ಎನ್ ಡಿಆರ್ ಎಫ್ ತಂಡ ಕೂಡ ರಕ್ಷಣಾ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ.

ಮಹಾರಾಷ್ಟ್ರಿಗರಿಗೆ ಗಣೇಶನ ಮೇಲೆ ಅಪಾರ ಭಕ್ತಿ. ಗಣೇಶನ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ಅತ್ಯಂತ ವಿಜೃಂಭಣೆಯಿಂದ ವಿಘ್ನ ನಿವಾರಕನನ್ನು ಪೂಜಿಸುತ್ತದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್ರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರ ಒಗ್ಗಟ್ಟಿಗಾಗಿ ಆರಂಭಿಸಿದ್ದ ಗಣೇಶನ ಮೆರವಣಿಗೆ ಉತ್ಸವವನ್ನು ಇಂದಿಗೂ ಶ್ರದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. (ಎಂ.ಎನ್)

Leave a Reply

comments

Related Articles

error: