ಪ್ರಮುಖ ಸುದ್ದಿವಿದೇಶ

ಪೊಲೀಸರಿಂದ ಹತ್ಯೆಗೀಡಾದ ಜಾರ್ಜ್ ಫ್ಲಾಯ್ಡ್ ಗೆ ಕೊರೊನಾ ಸೋಂಕು

ವಾಷಿಂಗ್ಟನ್‌,ಜೂ.4- ಅಮೆರಿಕದ ಮಿನ್ನಿಯಾಪೊಲಿಸ್‌ನಲ್ಲಿ ಪೊಲೀಸರಿಂದ ಹತ್ಯೆಗೈಯಲ್ಪಟ್ಟ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಗೆ ಕೊರೊನಾ ಸೋಂಕು ಇತ್ತು ಎಂಬುದು ಬೆಳಕಿಗೆ ಬಂದಿದೆ.

ಜಾರ್ಜ್ ಫ್ಲಾಯ್ಡ್‌ನ ಮರಣೋತ್ತರ ಪರೀಕ್ಷಾ ವರದಿ ಬಂದಿದೆ. ಆತನ ಕುಟುಂಬದವರ ಒಪ್ಪಿಗೆ ಪಡೆದೇ ವೈದ್ಯರು ಬಹಿರಂಗ ಪಡಿಸಿದ್ದಾರೆ. ಜಾರ್ಜ್​ ಫ್ಲಾಯ್ಡ್​ಗೆ ಏ.3ರಂದು ಕರೊನಾ ಪಾಸಿಟಿವ್ ಆಗಿತ್ತು. ಫ್ಲಾಯ್ಡ್​ ಸೋಂಕು ರಹಿತ ಕೊರೊನಾಕ್ಕೆ ತುತ್ತಾಗಿದ್ದರು. ಆದರೂ ಅವರ ಶ್ವಾಸಕೋಶಗಳು ಆರೋಗ್ಯಕರವಾಗಿಯೇ ಇದ್ದವು. ಆದರೆ ಹೃದಯದಲ್ಲಿ ಅಪಧಮನಿಗಳು ಕಿರಿದಾಗಿದ್ದವು ಎಂದು ಹೇಳಿದ್ದಾರೆ.

ಪೊಲೀಸ್​ ಅಧಿಕಾರಿ ಫ್ಲಾಯ್ಡ್ ಕುತ್ತಿಗೆಯನ್ನು ಒತ್ತಿ ಹಿಡಿದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಹೆನ್ನೆಪಿನ್ ಕೌಂಟಿಯಲ್ಲಿರುವ ವೈದ್ಯಕೀಯ ಪರೀಕ್ಷಕರ ಕಚೇರಿ ಅಧಿಕಾರಿ ತಿಳಿಸಿದ್ದಾರೆ. ಇದೊಂದು ಹತ್ಯೆಯೆಂದು ಮರಣೋತ್ತರ ವರದಿಯಲ್ಲಿ ಹೇಳಲಾಗಿದೆ. ಹೆನ್ನೆಪಿನ್‌ ಕೌಂಟಿ ವೈದ್ಯಕೀಯ ಪರೀಕ್ಷಣಾ ಕಚೇರಿ 20 ಪುಟಗಳ ಮರಣೋತ್ತರ ವರದಿಯನ್ನ ತಯಾರಿಸಿದೆ.

ಅಂಗಡಿಯೊಂದರಲ್ಲಿ ಸಿಗರೇಟ್​ ಕೊಂಡಿದ್ದ ಜಾರ್ಜ್​, ನಕಲಿ ನೋಟು ಕೊಟ್ಟಿದ್ದ. ಅಂಗಡಿಯವರು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕಾಗಮಿಸಿದ್ದ ಪೊಲೀಸರು ಅಮಾನುಷವಾಗಿ ವರ್ತಿಸಿ, ಆತನನ್ನು ಕೊಂದು ಬಿಟ್ಟರು. ಜಾರ್ಜ್​ ಫ್ಲಾಯ್ಡ್​ನನ್ನು ನೆಲಕ್ಕೆ ಒತ್ತಿ ಮಲಗಿಸಿ, ಆತನ ಕತ್ತಿನ ಮೇಲೆ ಓರ್ವ ಪೊಲೀಸ್​ ಅಧಿಕಾರಿ ತನ್ನ ಮೊಣಕಾಲನ್ನು ಗಟ್ಟಿಯಾಗಿ ಊರಿದ್ದ. ಎಂಟು ನಿಮಿಷಕ್ಕೂ ಅಧಿಕ ಕಾಲ ಹೀಗೆ ಒತ್ತಿ ಹಿಡಿದಿದ್ದ..ಆಗ ಜಾರ್ಜ್​ ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ನರಳುತ್ತಿದ್ದ. ಈ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಪ್ಪು ವರ್ಣೀಯರು, ಐ ಕಾಂಟ್​ ಬ್ರೀದ್ (ನನಗೆ ಉಸಿರಾಡಲು ಆಗುತ್ತಿಲ್ಲ) ಎಂಬ ಪೋಸ್ಟರ್​ಗಳನ್ನು ಹಿಡಿದಿದ್ದರು. (ಎಂ.ಎನ್)

 

Leave a Reply

comments

Related Articles

error: