ಪ್ರಮುಖ ಸುದ್ದಿಮೈಸೂರು

ನನಗೆ ಗೊತ್ತಿಲ್ಲದೇ ಯಾವುದೇ ವರ್ಗಾವಣೆಯೂ ಆಗಿಲ್ಲ ಅದೆಲ್ಲ ಶುದ್ಧ ಸುಳ್ಳು : ಶಾಸಕ ಸಾ.ರಾ.ಮಹೇಶ್ ಆರೋಪವನ್ನು ತಳ್ಳಿ ಹಾಕಿದ ಸಚಿವ ಎಸ್.ಟಿ ಸೋಮಶೇಖರ್

ಮೈಸೂರು,ಜೂ.5:- ಪರಿಸರದ ದಿನ ಇಷ್ಟು ಗಿಡ ಕೊಡಿಸಿ ಎಂದು ಕೇಳಿದ್ದಾರೆಯೇ ವಿನಃ ವರ್ಗಾವಣೆ ಕುರಿತು ನನ್ನ ಬಳಿ ಕೇಳಿಲ್ಲ.  ನನಗೆ ಗೊತ್ತಿಲ್ಲದೇ ಯಾವುದೇ ವರ್ಗಾವಣೆಯೂ ಆಗಿಲ್ಲ ಅದೆಲ್ಲ ಶುದ್ಧ ಸುಳ್ಳು ಎನ್ನುವ ಮೂಲಕ ಸಚಿವ ಎಸ್.ಟಿ ಸೋಮಶೇಖರ್ ಅವರು ಶಾಸಕ ಸಾ.ರಾ.ಮಹೇಶ್ ಅವರ ಆರೋಪವನ್ನು ಸಾರಾ ಸಗಟಾಗಿ ತಳ್ಳಿ ಹಾಕಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ನನ್ನನ್ನು ಮೈಸೂರು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಕೆಲಸ ಮೊದಲನೆಯದು ನನ್ನದು. ಪರಿಸರದ ದಿನ 27ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ. ಅದರ ಬಗ್ಗೆ ಜಾಸ್ತಿ ಗಮನ ಹರಿಸುವ ವ್ಯವಸ್ಥೆ ಮಾಡಿದ್ದೇವೆ. ಯಾರ್ಯಾರು ಗಿಡ ತೆಗೆದುಕೊಂಡು ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಕೌಂಟ್ ಮಾಡುವ ಕೆಲಸ. ಮೂರು ವರ್ಷ ಗಿಡಬೆಳೆಸಲು ಗಮನನೀಡಲಾಗುವುದು. ಮೈಸೂರು ಸಸ್ಯ ನಗರ ಎಂದು ಏನು ಡಿಸೈಡ್ ಆಗಿದೆ ಅದನ್ನು ಕಂಟಿನ್ಯೂ ಮಾಡುವ ದೃಷ್ಟಿ ಒಂದೇ.  ಕೆಲವರು ರಾಜಕಾರಣಕ್ಕೋಸ್ಕರ ಅದು ಇದು ಹೇಳ್ತಾ ಇರ್ತಾರೆ ಎಂದು ತಿರುಗೇಟು ನೀಡಿದ ಸಚಿವರು ಎರಡು ಉಸ್ತುವಾರಿ ಮೈಸೂರಿನಲ್ಲಿ ನನಗೆ ತಿಳಿದ ಮಟ್ಟಿಗೆ ಇಲ್ಲ. ನೂರಕ್ಕೆ ನೂರು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಎರಡು ಮೀಟಿಂಗ್ ಮಾಡಿದ್ದೇವೆ. 65 ಡಿಪಾರ್ಟ್ ಮೆಂಟ್ ನವರು ಅದರಲ್ಲಿ ಭಾಗವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದವರು, ಪೊಲೀಸ್ ಕಮೀಷನರ್ ಅವರು, ಕಾರ್ಪೋರೇಷನ್ ನವರು ಗಿಡಕೇಳಿದ್ದಾರೆ.  ಜಿಲ್ಲಾಪಂಚಾಯತ್ ನವರು 5ಲಕ್ಷ  ಗಿಡ ಕೇಳಿದಾರೆ. ರಾಜೀವ್ ಹತ್ರನೂ 9ರಿಂದ10ಸಾವಿರ ಗಿಡ ಕೇಳಿದ್ದಾರೆ. ಅರಣ್ಯ ಇಲಾಖೆಯವರು 1ಲಕ್ಷದ 20ಸಾವಿರ ಗಿಡ ನೆಟ್ಟಿದ್ದಾರೆ ಅದರ ಮಾಹಿತಿ ಕೊಡುವುದಾಗಿ ಹೇಳಿದ್ದಾರೆ ಎಂದರು.

ಈ ತಿಂಗಳು ಅವರೆಲ್ಲ ಎಲ್ಲೆಲ್ಲಿ  ಗಿಡ ಬೇಕಾದರೂ ನೆಡಲಿ. ಬೆಂಗಳೂರು ಯುನಿವರ್ಸಿಟಿ ವೈಸ್ ಚಾನ್ಸಲರ್ ಗೆ ಮನವಿ ಮಾಡಿದ್ದೇನೆ ದಯವಿಟ್ಟು ತಪ್ಪು ತಿಳಿಯಬೇಡಿ ನೀವೇನು ಗಿಡ ತಗೊಂಡು ಹೋಗ್ತೀರಿ, ಎಲ್ಲೆಲ್ಲಿ ನೀವು ಹಾಕ್ತೀರಿ ಅದನ್ನು ನಾನು ಕೌಂಟ್ ಮಾಡಿಕೊಳ್ಳುತ್ತೇನೆ  ಅಂತ. ಯಾರ ಮೇಲೂ ನನಗೆ ಅನುಮಾನವಿಲ್ಲ. ಈಗ ಕಾರ್ಪೋರೇಶನ್ ನವರು 5ಸಾವಿರ ಗಿಡ ಕೇಳಿದರು. 5ಸಾವಿರ ಗಿಡ ಎಲ್ಲಿ ನೆಡ್ತೀರಿ, ಅದನ್ನು ಮೂರು ವರ್ಷ ಬೆಳೆಸತಕ್ಕದ್ದಾಗಿರಬೇಕು. ಎಲ್ಲೆಲ್ಲಿ ಹಾಕಿದ್ದೀರಿ ನೀವು ತೋರಿಸಿ ಎಂದಿದ್ದೇವೆ ಎಂದು ತಿಳಿಸಿದರು.

ನನ್ನ ಬಳಿ ಯಾರೂ ಬಂದು ವಿಶ್ವನಾಥ್ ಆಗಲಿ ಮತ್ತೊಬ್ಬರಾಗಲಿ ನನ್ನತ್ರ ಬಂದು ವರ್ಗಾವಣೆ ಮಾಡಿಸಿ ಅದು ಇದು ಅಂತ ಕೇಳ್ತಿಲ್ಲ.  ಎಂಎಲ್ ಸಿ ಆಗಬೇಕು ಅದಕ್ಕೆ ಅದು ಇದು ದೇವಸ್ಥಾನ ಅಂತ ಓಡಾಡುತ್ತಿದ್ದಾರೆ ಅವರನ್ಯಾಕೆ ಮಧ್ಯ ತಂದು ಎಳಿತೀರಿ? ಯಾರೂ ಕೂಡ ನಮ್ಮ ಜಿಲ್ಲಾಡಳಿತ ವ್ಯವಸ್ಥೆಗೆ ಇಂಟರ್ ಪಿಯರ್ ಆಗಿಲ್ಲ. ಯಾರೋ ಬಂದು ನನ್ನತ್ರ ಇನ್ ಪ್ಲುಯೆನ್ಸ್ ಅದು ಇದು ಅಂತ ಯಾವುದೂ ಕೂಡ ಇಲ್ಲ. ಯಾವುದಾದರೂ ಅಭಿವೃದ್ಧಿ ಕಾರ್ಯ, ಪರಿಸರ, ಗಿಡದ್ದು, ನಮಗೆ ಅಷ್ಟು ಗಿಡ ಕೊಡ್ಸಿ, ಇಷ್ಟು ಕೊಡ್ಸಿ ಅಂತ ಅದಕ್ಕೆ ಕೇಳಿದ್ದಾರೆಯೇ ವಿನಃ ಮಿಕ್ಕಿದ ಯಾವುದೇ ವರ್ಗಾವಣೆ ನನ್ನ ಬಳಿ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಅಬಕಾರಿ ಇಲಾಖೆ ಅಧಿಕಾರಿ ವರ್ಗಾವಣೆ ನನಗೆ ಗೊತ್ತಿದ್ದೆ ಆಗಿದೆ.ಅವರ ಮೇಲೆ ಭ್ರಷ್ಟಾಚಾರದ ಆರೋಪ ಇತ್ತು. ನನಗೆ ಗೊತ್ತಿಲ್ಲದೆ ಯಾವ ವರ್ಗಾವಣೆಯೂ ಆಗಿಲ್ಲ.ವಿಶ್ವನಾಥ್ ಅವರು ನನ್ನ ಆಡಳಿತ ವ್ಯವಸ್ಥೆಯಲ್ಲಿ ಮೂಗು ತೂರಿಸಿಲ್ಲ.ಯಾವುದೇ ವರ್ಗಾವಣೆ ಮಾಡಿಸಿಕೊಂಡಿ ಅಂತ ಅವರು ಕೇಳಿಲ್ಲ.ದಂದೆ ಅನ್ನೋ ಪದವೇ ನನ್ನ ಜಯಮಾನದಲ್ಲಿ ಇಲ್ಲ‌. ದಂದೆ ಯಾರು ಮಾಡಿದ್ದಾರೋ ಅವರಿಗೆ ಗೊತ್ತಿರುತ್ತೆ. ಯಾರು ದುಡ್ಡು ಕೊಟ್ಟರು, ಯಾರು ದುಡ್ಡು ತಗೊಂಡಿದ್ದಾರೆ ಅವರಿಗೆ ಗೊತ್ತಿರುತ್ತೆ. ಆ ದಂದೆ ಬಗ್ಗೆ ನನಗೆ ಮಾಹಿತಿ ಇಲ್ಲ. ಸಾ.ರಾ.ಮಹೇಶ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಟಾಂಗ್ ನೀಡಿದರು.

ಈ ಸಂದೇಹ ಅನ್ನುವಂತದ್ದು ನಮ್ಮ ಜಾಯಮಾನದಲ್ಲಿ ಇಲ್ಲ. ಹಿಂದೆ ಯಾರ್ಯಾರು ಮಾಡಿದರು ಏನೇನು ಮಾಡಿದರು ಅದು ನಮಗೆ ಸಂಬಂಧ ಇಲ್ಲ. ನಾನು ಮೈಸೂರಿಗೆ ಬಂದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏನು ಅಭಿವೃದ್ಧಿ ಮಾಡಬೇಕು ಅದನ್ನು ಮಾಡ್ತಿದ್ದೇನೆ. ಎಲ್ಲವೂ ಮಾಹಿತಿ ಇದ್ದೇ ಆಗಿದೆ. ಟ್ರಾನ್ಸಪರ್ ಆಗಲಿ ಮತ್ತೊಂದು ಆಗಲಿ ನಾವು ಜಾಸ್ತಿ ಗಮನ ನೀಡ್ತಿಲ್ಲ. ಯಾಕೆಂದರೆ ಸರ್ಕಾರದಿಂದ ಆ ತರದ್ದೇನು ಇಲ್ಲ, ಆಯಾ ಕ್ಷೇತ್ರದ ಶಾಸಕರಿರ್ತಾರೆ ಅವರು ಅತ್ತ ಗಮನ ಹರಿಸ್ತಾರೆ. ಕೋವಿಡ್ ಇರೋದರಿಂದ ಆ ರೀತಿ ಏನು ನಡೆಯುತ್ತಿಲ್ಲ ಎಂದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: