ಮೈಸೂರು

ಪರಿಸರವನ್ನು ಸಂರಕ್ಷಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ : ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಅಭಿಮತ

ಮಳಲವಾಡಿಯ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಣೆ

ಮೈಸೂರು, ಜೂ.5:-  ವಿಶ್ವದಲ್ಲಿ ನೆಲೆಸಿರುವ ಮಾನವರು, ಪ್ರಾಣಿ ಹಾಗೂ ಪಕ್ಷಿಗಳ ಸಂಕುಲಕ್ಕೆ ಪರಿಸರಕ್ಕೆ ಬಹಳ ಅವಶ್ಯ ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದಾರ್ ಅಭಿಪ್ರಾಯ ಪಟ್ಟರು.

ಅವರು ಇಂದು ಬೆಳಿಗ್ಗೆ ಜಯನಗರದಲ್ಲಿರುವ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.  ಕಳೆದ ಹಲವಾರು ದಶಕಗಳ ಹಿಂದೆ ಅಪಾರವಾಗಿ  ಕಂಡು ಬಂದಿದ್ದ ವನ ಸಂಪತ್ತು ಮಾನವನ ಅತಿಯಾಸೆಯಿಂದಾಗಿ ಕಡಿಮೆಯಾಗುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದರು.

ಪರಿಸರವನ್ನು ಅಭಿವೃದ್ಧಿ ಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಪ್ರವೃತ್ತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಹೊಸ ನ್ಯಾಯಾಲಯದ ಆವರಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಖಾಲಿ ಜಾಗ ಇರುವುದನ್ನು ಗಮನಿಸಿ ವಿಶ್ವ ಪರಿಸರ ದಿನವಾದ ಇಂದು ಗಿಡಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ ಇವು ಹೆಮ್ಮರವಾಗಿ ಬೆಳೆದು ನ್ಯಾಯಾಲಯಕ್ಕೆ ಬರುವವರಿಗೆ ಉತ್ತಮ ವಾತಾವರಣ ಸಿಗುವುದರೊಂದಿಗೆ ಇಲ್ಲಿನ ಪರಿಸರವೂ ಉತ್ತಮಗೊಳ್ಳಲಿದೆ ಎಂದು ತಿಳಿಸಿದ ಅವರು ಸಾರ್ವಜನಿಕರು ತಮ್ಮ ಸುತ್ತಮುತ್ತ ಇರುವ ಪರಿಸರವನ್ನು ಹಾಳು ಮಾಡದಂತೆ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವಮಾನೆ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಸರವನ್ನು ವೃದ್ಧಿಪಡಿಸಲು ಹೊಸಹೊಸ ಬಡಾವಣೆಗಳಲ್ಲಿ ಉದ್ಯಾನವನಗಳನ್ನು ನಿರ್ಮಿಸುವುದರೊಂದಿಗೆ ಬೃಹತ್ ನಿವೇಶನ ಹೊಂದಿರುವವರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ನಿವೇಶನದ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವಂತೆ ನಿರ್ದೇಶಿಸಿರುವುದು ಬಹಳ ಸಂತಸದ ಸಂಗತಿ. ಆದಕಾರಣ ನಾವೆಲ್ಲರೂ ಪರಿಸರವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಜಾಗೃತರಾಗೋಣ ಎಂದರಲ್ಲದೆ ಇಂದಿನ ಕಾರ್ಯಕ್ರಮವು ಪರಿಸರವನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಒಂದು ಮಹತ್ತರ ಹೆಜ್ಜೆ ಎಂದರೆ ಅತಿಶಯೋಕ್ತಿಯೇನಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬಾರ್ ಅಸೋಸಿಯೇಷನ್‍ನ ಪರಿಷತ್ ಸದಸ್ಯ ಚಂದ್ರಮೌಳಿ, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಆನಂದ ಕುಮಾರ್, ಕಾರ್ಯದರ್ಶಿ ಡಿ. ಶಿವಣ್ಣ, ನ್ಯಾಯಾಂಗ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಟಿ. ಬಾಲಕೃಷ್ಣ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: