ಪ್ರಮುಖ ಸುದ್ದಿಮೈಸೂರು

ಗಿಡಗಳನ್ನು ಬೆಳೆಸಿದರೆ ಸಾಲದು, ಅದರ ಪಾಲನೆ ಪೋಷಣೆಯೂ ಅಷ್ಟೆ ಮುಖ್ಯ : 27ಲಕ್ಷ ಗಿಡನೆಡುವ ಗುರಿ; ಸಚಿವ ಎಸ್.ಟಿ.ಸೋಮಶೇಖರ್

ಜೀವವೈವಿಧ್ಯತೆ ಉಳಿಸುವ ಕೆಲಸವಾಗಬೇಕು : ರಾಜವಂಶಸ್ಥ ಯದುವೀರ್ ಒಡೆಯರ್

ಮೈಸೂರು,ಜೂ.5:- ಗಿಡಗಳನ್ನು ಬೆಳೆಸಿದರೆ ಸಾಲದು, ಅದರ ಪಾಲನೆ ಪೋಷಣೆಯೂ ಅಷ್ಟೆ ಮುಖ್ಯ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಅವರಿಂದು ಜೆಪಿನಗರದಲ್ಲಿರುವ ಶೃಂಗೇರಿ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರ ಉದ್ಯಾನವನದಲ್ಲಿ  ಮೈಸೂರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವಪರಿಸರ ದಿನಾಚರಣೆ -2020 ಅಂಗವಾಗಿ ಹಮ್ಮಿಕೊಳ್ಳಲಾದ ಗಿಡನೆಡುವ ಮತ್ತು ಸಸಿವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಗಿಡ ನೀಡುವುದು, ಮೈಸೂರಿನ ರಾಜವಂಶಸ್ಥರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದು ತಂದೆ ತಾಯಿಯರು ಮಾಡಿದ ಪುಣ್ಯ. ಅರಣ್ಯ ಇಲಾಖೆಯವರು 27ಲಕ್ಷಗಿಡಗಳನ್ನು ಬೆಳೆಸತಕ್ಕಂತದ್ದಕ್ಕೆ ಚಾಲನೆ ನೀಡಿದ್ದಾರೆ. ರಾಜೀವ್ ಅವರು 15ಸಾವಿರ ಗಿಡ ಬೆಳೆಸತಕ್ಕಂತದಕ್ಕೆ ಚಾಲನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ಶಾಸಕರಾದ  ರಾಮದಾಸ್, ನಾಗೇಂದ್ರ ಸೇರಿ ಎರಡು ಸಭೆಯನ್ನು ಮಾಡಿದ್ದರು. ಸುಮಾರಿ 45 ಡಿಪಾರ್ಟ್ ಮೆಂಟ್ ಮುಖ್ಯಸ್ಥರು ಭಾಗವಹಿಸಿದ್ದರು. ಈಗಾಗಲೇ ಗಿಡ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಪಂ ಸಿಇಒ ಕೂಡ ಅವರ ವ್ಯಾಪ್ತಿಯಲ್ಲಿ ಐದು ಲಕ್ಷ ಗಿಡಗಳನ್ನು  ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.  ಯಾಕೆಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಏನು ನರೇಗಾ ಅಡಿಯಲ್ಲಿ ಕೆಲಸ ಮಾಡತಕ್ಕಂತದ್ದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆ ಊರಿನಲ್ಲಿ ಕೆರೆಯನ್ನು ಹೂಳೆತ್ತ ತಕ್ಕಂತದ್ದು ಏನೇನು ಕೆಲಸವಿದೆ. ಅದಕ್ಕೆ ಹಣವನ್ನು ಬಿಡುಗಡೆ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್  ಪ್ರತಿ ಗ್ರಾಮದಲ್ಲೀ ಕೂಡ ಗಿಡ ನೆಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಅದರ ಪ್ರಯುಕ್ತ ಎಲ್ಲಾ ಇಲಾಖಾಧಿಕಾರಿಗಳಿಗೆ  ಮಾಹಿತಿ ನೀಡಿದ ಸಂದರ್ಭ ಜಿ.ಪಂ ಸಿಇಒ ಮಿಶ್ರ 5ಲಕ್ಷ ಗಿಡಗಳನ್ನು ನೀಡತಕ್ಕ ವಿಷಯವನ್ನು ಅವರ ವ್ಯಾಪ್ತಿಯಲ್ಲಿಯೂ, ಕಾರ್ಪೋರೇಶನ್ ಆಯುಕ್ತರು ಕೂಡ 5ಸಾವಿರ ಗಿಡಗಳನ್ನು ಅವರ ವ್ಯಾಪ್ತಿಯಲ್ಲಿ , ಮುಡಾ ಕಮಿಷನರ್ ನಟೇಶ್, ಪೊಲೀಸ್ ಕಮೀಷನರ್  ಕೂಡ ಗಿಡವನ್ನು ನೆಡುವ ಕಾರ್ಯಕ್ರಮ ನಡೆಸುತ್ತಿದ್ದಾರೆ. ಗಿಡವನ್ನು ನೆಡತಕ್ಕಂತದ್ದು ಮಾತ್ರವಲ್ಲ, ಪೋಷಣೆ ಕೂಡ ಮಾಡತಕ್ಕಂತದ್ದು. ಮಳೆ ಜೋರಾಗಿ ಬಂದ ಸಂದರ್ಭ ಎಷ್ಟೋ ಗಿಡ ನಾಶವಾಗಿದೆ. ಗಟ್ಟಿಯಾದ ಗಿಡ ನೆಡತಕ್ಕಂತದ್ದು ಎಂದು ಸಲಹೆ ನೀಡಿದರು.

ರಸ್ತೆ ನಿರ್ಮಾಣ ಕಾಮಗಾರಿ ಯಾವುದೇ ಇರಲಿ ಗಿಡ ತೆಗೆಯುವ ಕೆಲಸ ವಾಗಬಾರದು, ಎಲ್ಲಿ ಕಾಮಗಾರಿ ನಡೆಯಲ್ಲ ಅಲ್ಲಿ ಗಿಡ ನೆಡುವ ಕೆಲಸವಾಗಬೇಕು. ಎಲೆಕ್ಟ್ರಿಕ್ ಪೋರ್ಸ್ ಬರತ್ತೆ ಅದರ ಕೆಳಗಡೆ ಅವೈಡ್ ಮಾಡಬೇಕು. ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಂಡಮ್ ಆಗಿ ವೆರಿಫಿಕೇಶನ್ ಮಾಡ್ತೇನೆ ಅಂತ ಹೇಳಿದ್ದೇನೆ. ಕೌಂಟ್ ಮಾಡುವ ಕೆಲಸ ಮಾಡ್ತೇನೆ. ಚಾಮುಂಡಿಬೆಟ್ಟದಲ್ಲಿ ಅಕಸ್ಮಾತ್ ಒತ್ತುವಾರಿ ಆಗಿದ್ದರೆ ಬಿಡಿಸಿಕೊಳ್ಳುವ ಜವಾಬ್ದಾರಿ ರೆವೆನ್ಯೂ ಮಂತ್ರಿ ಮತ್ತವರ ಕಾರ್ಯದರ್ಶಿಗಳಿಗೆ ನೀಡಲಾಗುತ್ತಿದ್ದು,  ಅರಣ್ಯಮಂತ್ರಿ ಮತ್ತು ಪಿಸಿಸಿಎಫ್ ಗೆ ಸುತ್ತ ಪೆನ್ಸಿಂಗ್ ಹಾಕುವ ಜವಾಬ್ದಾರಿ. ಮೈಸೂರಿನಿಂದ ಹೋಗತಕ್ಕಲ್ಲಿ ಗಿಡಗಳು ಅವಶ್ಯಕತೆ ಇಲ್ಲ. ಆದರೆ ನಂಜನಗೂಡು ಕಡೆ ಗಿಡಗಳು ಇಲ್ಲ ಒಂದು ಲಕ್ಷ ಗಿಡಗಳನ್ನು ನೆಡಬೇಕು ಎಂಬ ಯೋಜನೆ ಮಾಡಿ ಮಂತ್ರಿಗಳಿಬ್ಬರು ಅಧಿಕಾರಿಗಳಿಬ್ಬರನ್ನು ಆಮಂತ್ರಿಸಿದ್ದೇನೆ ಎಂದರು. ಗಿಡ ನೆಟ್ಟರೆ ಸಾಲದು. ಮೂರು ವರ್ಷ ಮೆಂಟೇನ್ ಮಾಡಬೇಕು. ನೀರಿನ ವ್ಯವಸ್ಥೆ ಆಗುತ್ತಿಲ್ಲ ಎಂದು ಮಾಹಿತಿ ಕೊಟ್ಟಿದ್ದಾರೆ. ಪರ್ಮೆಂನೆಂಟ್ ನೀರಿನ ವ್ಯವಸ್ಥೆಗೆ ಚಿಂತನೆಯ ಕಾನ್ಸೆಪ್ಟ್ ಇಟ್ಟಿದ್ದೇನೆ. ಎಲ್ಲೆಲ್ಲಿ ಸ್ಯಾನಿಟರಿ ತೊಂದರೆ ಇದೆ, ರಾಜಕಾಲುವೆ ಒತ್ತುವರಿ ಆಗ್ತಾ ಇದೆ ಪರ್ಮನೆಂಟ್ ಸಾಲ್ವ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡ್ತಿದ್ದೇವೆ. ಕಾವೇರಿ ನೀರನ್ನು ತರುವ ಕೆಲಸ ನಡೆಯುತ್ತಿದೆ. ಯುಜಿಡಿ ಲೀಕ್ ಆಗದೆ ರಸ್ತೆಗೆ ಬರದ ರೀತಿಯಲ್ಲಿ ಕೆಲಸ ಕಾರ್ಯಗಳ ಚಿಂತನೆ ಕೂಡ ಆಗ್ತಿದೆ. ಇದಕ್ಕೆ ಸಾರ್ವಜನಿಕರು ಸ್ಪಂದಿಸಬೇಕು. ಬೆಂಗಳೂರು ವಿವಿ ಚಾನ್ಸಲರ್ ಬಳಿ  ಗಿಡ ನೆಡುವುದು ಮಾತ್ರವಲ್ಲ ವಿದ್ಯಾರ್ಥಿಗಳು ಗಿಡಗಳು ನೋಡಿಕೊಳ್ಳುವ ಕೆಲಸವನ್ನು ಕಂಟಿನ್ಯೂ ಮಾಡಬೇಕು ಎಂದಿದ್ದೇನೆ. ಒಂದು ಲಕ್ಷ ಗಿಡ ನೀಡುವ ಕೆಲಸ ಆಗುತ್ತಿದೆ. ಟಿ.ನರಸೀಪುರ ಮೇನ್ ರೋಡ್ ಲ್ಲಿ ಅಲ್ಲಲ್ಲಿ ಗುಂಡಿ ತೋಡಿ ಗಿಡನೆಡುವ ಕೆಲಸ ವಾಗುತ್ತಿದೆ  ಎಂದರು.

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಮಾತನಾಡಿ  ಪರಿಸರ ಮತ್ತು ಅದರ ಸಂರಕ್ಷಣೆಗೋಸ್ಕರ ನಾವು ಮಾಡಬೇಕಾಗಿರುವ ಕೆಲಸವಿದು.  ವಿಶ್ವ ಪರಿಸರ ದಿನಾಚರಣೆ  ಗಿಡ ನೆಡುವ ಮೂಲಕ ಆಚರಣೆಯಾಗುತ್ತಿದೆ. ಕನ್ನಡಿಗರಾಗಿ ಜೀವವೈವಿಧ್ಯತೆ ಏನಿದೆ ಕರ್ನಾಟಕದಲ್ಲಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಬಯೋಡೈವರ್ಸಿಟಿ ಹಾಟ್ ಸ್ಪಾಟ್ ಡಿಕ್ಲೇರ್ ಮಾಡಿದ್ದಾರೆ. ಭಾರತದಲ್ಲಿ ಪಶ್ಚಿಮ ಘಟ್ಟಗಳು ಬಹಳ ಮುಖ್ಯವಾದದ್ದು, ಪಶ್ಚಿಮ ಘಟ್ಟದಿಂದಲೇ ಕಾಡುಗಳು .ಬಂಡೀಪುರ, ನಾಗರಹೊಳೆ ಕೂಡ ಸೇರಿವೆ. ಕಾಡುಗಳು ಚಾಮುಂಡಿಬೆಟ್ಟಕ್ಕೆ ಬಂದು ಸೇರ್ತಿತ್ತು. ಈಗ ಆ ಕನೆಕ್ಷನ್ ಇಲ್ಲ. ಜೀವವೈವಿಧ್ಯತೆಗೋಸ್ಕರ ನಾವು ಏನೇನು ಕೆಲಸ ಮಾಡಬೇಕು, ಹಾಗೂ ಅವುಗಳ ಕುರಿತು ನಮ್ಮ ಜಾಗೃತಿ ಏನಿರಬೇಕು, ಕಾಡುಗಳ ಜೊತೆ, ಪ್ರಾಣಿಪಕ್ಷಿಗಳ ಜೊತೆ ಹೇಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಮದರು.

ಬೆಟ್ಟಕ್ಕೆ ಹೋಗಿ ದೇವಿಯ ಆಶೀರ್ವಾದ ಪಡೆಯೋದು ಸಂಪ್ರದಾಯ. ಹೋಗುವಾಗ ನಾವೇನು ಉತ್ಪನ್ನಗಳನ್ನು ತಗೊಂಡು ಹೋಗ್ತೀವಿ ಅದನ್ನು ಬಿಸಾಕ್ತೀವಿ, ತಗೊಂಡು ಹೋಗಿ ಕೆಳಗಡೆ ಬರುವಾಗಲೂ ತೆಗೆದುಕೊಂಡು ಬರಬೇಕು. ಚಿಕ್ಕ ಪದ್ಧತಿಗಳಿಂದಲೇ ತುಂಬಾ ಸಹಾಯವಾಗತ್ತೆ. ನಮ್ಮ ಪೂರ್ವಜನರ ಕಾಲದಲ್ಲಿ ಪ್ಲಾಸ್ಟಿಕ್  ಇರಲಿಲ್ಲ.  ಹಿರಿಯರ ಕಾಲದಲ್ಲಿ ಪ್ಲಾಸ್ಟಿಕ್ ಬಳಕೆ ಅಷ್ಟೊಂದು ಇರಲಿಲ್ಲ. ಪ್ಲಾಸ್ಟಿಕ್ ಬೇಕಾಗಿದ್ಯಾ ಅಂತ ಪ್ರಶ್ನೆ ಮಾಡ್ಕೋಬೇಕು. ಮಾರ್ಕೆಟ್ ಹೋದ ಸಂದರ್ಭದಲ್ಲಿ ಪ್ಲಾಸ್ಟಿಕ್  ಬದಲು ಬುಟ್ಟಿ ತಗೊಂಡೋದರೆ ಪರಿಸರಕ್ಕೆ ಎಷ್ಟೊಂದು ಸಹಾಯವಾಗತ್ತೆ ಅನ್ನೋದನ್ನು ಆಲೋಚನೆ ಮಾಡಬೇಕು. ಮೈಸುರು ಸುತ್ತಮುತ್ತ ಇರುವ ಪ್ರಾಣಿಗಳು ಪಕ್ಷಿಗಳನ್ನು ಸಂರಕ್ಷಣೆ ಮಾಡಬೇಕು. ಜೀವ ವೈವಿಧ್ಯತೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಪ್ಲಾಸ್ಟಿಕ್ ಬಿಸಾಕುವುದರಿಂದ ಮಾಲಿನ್ಯ ಉಂಟಾಗ್ತಿದೆ. ಸಂರಕ್ಷಣೆಗಾಗಿ ಕಾಳಜಿ ಇಟ್ಟುಕೊಳ್ಳಬೇಕು. ಮೈಸೂರು ಇದಕ್ಕೂ ಮಾದರಿಯಾದರೆ ಹೆಮ್ಮೆಯ ವಿಷಯ ಎಂದರು.

ಅರಮನೆ ಪರವಾಗಿ ಕೃತಜ್ಞತೆ. ಸಾಂಕ್ರಾಮಿಕ ಪರಿಸ್ಥಿಯಲ್ಲೂ ಬಹಳ ಮಾದರಿಯಾಗಿ ಕೊರೋನಾ ವಿರುದ್ಧ ಜಯಗಳಿಸಿದ್ದಾರೆ. ಏನೇನು ಪದ್ಧತಿ ಅಳವಡಿಸಿಕೊಂಡಿದ್ದಾರೆ ಅದನ್ನು ಮುಂದುವರಿಸಿ. ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಜನುಮದಿನ. ಇತಿಹಾಸದಲ್ಲಿ ಮರೆತುಹೋಗಿದ್ದೇವೆ. ಹಿಂದುಳಿದ ವರ್ಗಕ್ಕೆ ಹೆಚ್ಚು ಕೆಲಸ ಮಾಡಿದ್ದರಲ್ಲಿ ಇವರದ್ದೇ ಕೈ ಇತ್ತು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ ಮರಗಿಡ ನೆಡುವ ಮೂಲಕ ಅರಣ್ಯ ಇಲಾಖೆ ಚಾಲನೆ ನೀಡಿದೆ. ರೈತರಿಗೆ ವಿವಿಧ ಸಸಿಗಳನ್ನು ನೀಡುವ ಮೂಲಕ ಚಾಲನೆ ಆಗಿದೆ. ಹೆಚ್ಚಿನ ಗಿಡ ನೆಡುವ ಮರಗಳ ಸಾಂದ್ರತೆ ಹೆಚ್ಚು ಮಾಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ನಮ್ಮಲ್ಲಿರತಕ್ಕ ವನ್ಯ ಸಂಪತ್ತು, ಪಕ್ಷಿ ,ಪ್ರಾಣಿ, ಗಿಡ ಮರ ಗಳನ್ನು ಸಂರಕ್ಷಿಸಬೇಕು, ಹೊಸದು ಸೃಜನೆಯ ಜೊತೆ ಹಿಂದೆ ಸೃಜಿಸಿದ್ದನ್ನು ಉಳಿಸಿಕೊಳ್ಳುವ ಕೆಲಸಬೇಕು. ಕುಡಿಯುವ ನೀರು ಭದ್ರತೆ, ಆಹಾರದ ಭದ್ರತೆ ಮಳೆಯನ್ನು ನಂಬಿದೆ. ನದಿಗಳಲ್ಲಿ ಬರುವ ಹೂಳನ್ನು ಕೂಡ ಜಮೀನಿಗೆ ಹಾಕ್ತಾರೆ. ಇವೆಲ್ಲ ನೈಸರ್ಗಿಕವಾಗಿ ಬರುವಂಥದ್ದು. ಒಂದು ಕಟ್ ಆದರೆ ಕೊಂಡಿ ಕಳಚತ್ತೆ. ಆ ಸರಪಳಿಯನ್ನು ಉಳಿಸಿಕೊಳ್ಳಬೇಕು. ಹವಾಮಾನದಲ್ಲಿನ ವೈಪರೀತ್ಯ  ಕರ್ಮದ ಫಲ. ಮುಂದಿನ ಪೀಳಿಗೆಗಾಗಿ ಇನ್ನೂ ಹೆಚ್ಚಿನ ಕಾಳಜಿಯಿಂದ ನಡೆದುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಜಗತ್ತನ್ನು ನೀಡಬಹುದು ಎಂಬುದು ನನ್ನ ಭಾವನೆ. ಕೋವಿಡ್-19ರ ಮುನ್ನೆಚ್ಚರಿಕೆಯನ್ನು ಮುಂಬರುವ ತಿಂಗಳಲ್ಲೂ ಮುಂದುವರಿಸಿ. ಸೋಮವಾರದಿಂದ ಹಲವು ನಿರ್ಬಂಧ ತೆರವಾಗಲಿದೆ. ಹೋಟೆಲ್, ದೇವಸ್ಥಾನ, ರೆಸಾರ್ಟ್, ಅರಣ್ಯ ಸಫಾರಿ ಓಪನ್ ಆದಮೇಲೆ ಮುಕ್ತ ಅವಕಾಶ ಕೊಡುವುದರಿಂದ  ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಲಿದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ. ಒಬ್ಬರ ಕರ್ಮದ ಫಲ ಸಾರ್ವಜನಿಕರು ಅನುಭವಿಸಬೇಕಾಗತ್ತೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ರಾಮದಾಸ್, ನಾಗೇಂದ್ರ, ಉಪಮೇಯರ್ ಶ್ರೀಧರ್ , ಸಹಕಾರಿ ಧುರೀಣ, ಹೆಚ್.ವಿ.ರಾಜೀವ್, ಮನಪಾ ಸದಸ್ಯೆ ಶಾಂತಮ್ಮ ವಡಿವೇಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಪಂ ಸಿಸಿಒ ಪ್ರಶಾಂತ್ ಕುಮಾರ್ ಮಿಶ್ರಾ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಸಿ.ಬಿ.ರಿಷ್ಯಂತ್, ಮುಡಾ ಆಯುಕ್ತ ಡಾ.ಕೆ.ಬಿ.ನಟೇಶ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ  ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: