ಮೈಸೂರು

ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಿದ ಮೈಸೂರು ವಿಭಾಗದ ಹಿರಿಯ ರೈಲ್ವೆ ಅಧಿಕಾರಿಗಳು

ಮೈಸೂರು,ಜೂ.5:-  2020ನೆಯ ವರ್ಷದ ವಿಶ್ವ ಪರಿಸರ ದಿನವನ್ನು ಇಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ  ಅಪರ್ಣ ಗರ್ಗ್ ಮತ್ತು ಮೈಸೂರು ವಿಭಾಗದ ಇತರ ಹಿರಿಯ ರೈಲ್ವೆ ಅಧಿಕಾರಿಗಳು ಗಿಡ ನೆಡುವುದರ ಮೂಲಕ ಆಚರಿಸಿದರು.  ಕಾರ್ಯಕ್ರಮದ ಅಂಗವಾಗಿ ಕೆ.ಆರ್‌.ಎಸ್. ರಸ್ತೆಯ ರೈಲ್ವೆ ಜಾಗದ ಸರಹದ್ದಿನಲ್ಲಿ ಸಿಲ್ವರ್ ಸ್ಪರ್ಸ್‌ನ 30 ಸಸಿಗಳನ್ನು ನೆಡಲಾಯಿತು.

ರೈಲ್ವೆ ಮೈದಾನದ ಮೂಲಕ ಹಾದುಹೋಗುವ ‘ವಾಣಿ ವಿಲಾಸ ವಾಟರ್ ವರ್ಕ್ಸ್‌’ನಿಂದ ಹರಿಯುವ ಹೆಚ್ಚುವರಿ ನೀರಿನ ಸಣ್ಣದಾದ ತೊರೆಯ ಸ್ಥಳದಿಂದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ತೆರವುಗೊಳಿಸಲಾಯಿತು. ಕೆ.ಆರ್‌.ಎಸ್. ರಸ್ತೆಯಲ್ಲಿ ನಗರದ ಹೃದಯಭಾಗದಲ್ಲಿ ಇರುವ ಈ ಪ್ರದೇಶಕ್ಕೆ ಪುನಃಶ್ಚೇತನ ನೀಡಲಾಗಿದ್ದು, ಇದು ಈ ಪ್ರದೇಶಕ್ಕೆ ಗಮನಾರ್ಹ ಹಸಿರು ಹೊದಿಕೆಯನ್ನು ಕೊಡುತ್ತದೆ. ಈ ಪ್ರದೇಶದಲ್ಲಿ ಸುತ್ತಲ್ಲಿನ ಒಣ ಎಲೆ ಸಂಗ್ರಾಹಕ ಮತ್ತು ಮಿಶ್ರಗೊಬ್ಬರ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ವಾರಕ್ಕೆ ಕನಿಷ್ಠ ಎರಡು ಗಂಟೆಗಳಾದರೂ ಸ್ವಚ್ಛತೆಗಾಗಿ ವಿನಿಯೋಗಿಸಿ ಶ್ರಮದಾನ ಮಾಡಲು ಪ್ರೇರೇಪಿಸುವ ‘ಸ್ವಚ್ಛತಾ ಪ್ರತಿಜ್ಞೆ’ ಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬೋಧಿಸಿದರು. ಇದು ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವ ರೈಲ್ವೆಯ ಪ್ರಯತ್ನವಾಗಿದೆ.

ಜೀವವೈವಿಧ್ಯತೆಯನ್ನು ಆಚರಿಸುವುದು  ಎನ್ನುವ ಈ ವರ್ಷದ ವಿಷಯಕ್ಕೆ ಅನುಗುಣವಾಗಿ ಸಮತೋಲಿತ ಪರಿಸರ ವ್ಯವಸ್ಥೆಯನ್ನು ತಿಳಿಸಿ ಹೇಳುವ ವೀಡಿಯೋ  ತುಣುಕನ್ನು ಸಹ ಪ್ರಾರಂಭಿಸಲಾಯಿತು. ತದನಂತರ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಕಚೇರಿಯಿಂದ ಈ ವಿಷಯದ ಕುರಿತಾಗಿ ಆಯೋಜಿಸಲಾದ ‘ವೆಬ್‌ನೇರ್’ ನಡೆಸಲಾಯಿತು.

ಸುಬ್ರಮಣ್ಯ ರೋಡ್, ಆರಸಿಕೆರೆ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿಭಾಗದ ವಿವಿಧ ನಿಲ್ದಾಣಗಳಲ್ಲಿ ಮತ್ತು ಕೋಚಿಂಗ್ ಡಿಪೋಗಳಲ್ಲಿ ವಿಶೇಷ ಸ್ವಚ್ಛತಾ ಶ್ರಮದಾನವನ್ನು ನಡೆಸಲಾಯಿತು.

ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ‘ಜೀವವೈವಿಧ್ಯ’ ವಿಷಯದ ಕುರಿತು ನಡೆಸಲಾದ ಆನ್‌ಲೈನ್ ಚಟುವಟಿಕೆ ಸ್ಪರ್ಧೆಯು ಉತ್ತಮ ಪ್ರತಿಕ್ರಿಯೆಯನ್ನು ನೀಡಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: