ಪ್ರಮುಖ ಸುದ್ದಿ

ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 200 ಮನೆಗಳ ನಿರ್ಮಾಣ : ಸಚಿವ ವಿ.ಸೋಮಣ್ಣ ಭರವಸೆ

ರಾಜ್ಯ( ಮಡಿಕೇರಿ) ಜೂ.5 :- ಕೊಡಗು ಜಿಲ್ಲೆಯಲ್ಲಿ ಎಲ್ಲಾ ಬಡವರಿಗೂ ಮನೆ ಇರಬೇಕು. ಸೂರು ಇಲ್ಲ ಎಂಬ ದೂರುಗಳು ಕೇಳಿ ಬರಬಾರದು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾಗ ಒದಗಿಸಿದ್ದಲ್ಲಿ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 200 ಮನೆಗಳನ್ನು ನಿರ್ಮಿಸಲಾಗುವುದು ಎಂದು ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಪ್ರಕಟಿಸಿದ್ದಾರೆ.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಜಂಬೂರಿನಲ್ಲಿ ಕೆಲವು ಮನೆಗಳು ಪೂರ್ಣಗೊಳ್ಳದಿರುವ ಬಗ್ಗೆ ಮಾಹಿತಿ ಇದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಭ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೊಡಗು ಜಿಲ್ಲೆಯ ಜಂಬೂರು, ಮದೆನಾಡು, ಕರ್ಣಂಗೇರಿಯಲ್ಲಿ ನಿರ್ಮಿಸಿರುವ ಮನೆಗಳು ರಾಷ್ಟ್ರದಲ್ಲಿಯೇ ಮಾದರಿಯಾಗಿದೆ ಎಂದು ವಸತಿ ಸಚಿವರಾದ ವಿ.ಸೋಮಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಿದ್ದರಿಂದ ಕೊರೊನಾ ವೈರಸ್‍ನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಆ ದಿಸೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಸಚಿವರು ನುಡಿದರು.
ಪ್ರತಿ ಹಂತದ ಅಧಿಕಾರಿಗಳು ಸಮಾಜ ಮುಖಿಯಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಶ್ರದ್ಧೆ, ಇಚ್ಛಾಶಕ್ತಿ ಇರಬೇಕು. ಆ ದಿಸೆಯಲ್ಲಿ ಜಿಲ್ಲಾಡಳಿತ ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಕೋವಿಡ್-19 ಮತ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕರ್ತವ್ಯ ನಿರ್ವಹಿಸಿದ್ದು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದಾಗ ಜನಪ್ರತಿನಿಧಿಗಳು ಬೆನ್ನು ತಟ್ಟುವಂತಾಗಬೇಕು. ಆ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಒಳ್ಳೆಯ ಗುಣ ಮಾದರಿ ಎಂದು ಸಂಸದರು ಗುಣಗಾನ ಮಾಡಿದರು.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಒ ಹೀಗೆ ಎಲ್ಲಾ ಹಂತದ ಅಧಿಕಾರಿಗಳು ಸಂಯಮ, ಸಹನೆಯಿಂದ ಕರ್ತವ್ಯ ನಿರ್ವಹಿಸಿ ಕೋವಿಡ್-19 ನ್ನು ನಿಯಂತ್ರಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಪ್ರತಿಯೊಬ್ಬರ 5 ಬೆರಳುಗಳು ಸಮನಾಗಿ ಇರುವುದಿಲ್ಲ. ಆದ್ದರಿಂದ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋದಾಗ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಅಧಿಕಾರಿಗಳು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಹಾಗಾದಾಗ ಒಳ್ಳೆಯ ಆಡಳಿತ ನಿರೀಕ್ಷಿಸಬಹುದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಆತ್ಮತೃಪ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಆತ್ಮವಂಚನೆ ಮಾಡಿಕೊಳ್ಳಬಾರದು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಕಿವಿಮಾತು ಹೇಳಿದರು.
ಕೊರೊನಾ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದಿಸಿದ್ದಾರೆ. ಈ ಕಾರ್ಯ ಮುಂದುವರೆಸಬೇಕು. ಮುಂದಿನ ಮಳೆಗಾಲದಲ್ಲಿಯೂ ಸಹ ಉತ್ತಮವಾಗಿ, ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮಾಡಬೇಕು ಎಂದು ಶಾಸಕರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಜಿಲ್ಲೆಗೆ ಒಳ್ಳೆಯ ಕ್ಯಾಪ್ಟನ್ ಸಿಕ್ಕಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರನ್ನು ಕೊಂಡಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಅವರು ‘ನಾನು ಹೇಳುವುದಕ್ಕಿಂತ, ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಹೇಳುವ ಕೆಲಸವಾಗಬೇಕು ಎಂದು ಸದಾ ಹೇಳುತ್ತಾರೆ ಎಂದು ಸುನಿಲ್ ಸುಬ್ರಮಣಿ ಅವರು ಗುಣಗಾನ ಮಾಡಿದರು.
ಕೋವಿಡ್-19 ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಮಾಜಕ್ಕೆ ಮಾದರಿಯಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದೀರಿ ಎಂದು ಸುನಿಲ್ ಸುಬ್ರಮಣಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ನ್ನು ಪರಿಣಾಮಕಾರಿ ನಿಯಂತ್ರಣ ಮತ್ತು ನಿಯಂತ್ರಿಸುವಲ್ಲಿ ಶ್ರಮಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಡಿ.ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ, ವೈದ್ಯಾಧಿಕಾರಿಗಳು, ಮೂರು ತಾಲ್ಲೂಕಿನ ತಾ.ಪಂ.ಇಒ ಗಳು, ತಹಶೀಲ್ದಾರರು, ಡಿವೈಎಸ್‍ಪಿಗಳು, ಪ.ಪಂ.ಮುಖ್ಯಾಧಿಕಾರಿಗಳು, ಇತರರಿಗೆ ಶಾಲೂ, ಫಲ ತಾಂಬೂಲ ನೀಡಿ ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ವಾಗತಿಸಿದರು. ಅನಿತಾ ನಿರೂಪಿಸಿ, ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: